ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ದೊಡ್ಡ ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗಿದ್ದು, ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಸಾಮಾನ್ಯ ಜನರಿಗೆ ಅಧಿಕಾರದ ಹಕ್ಕನ್ನು ತಂದುಕೊಟ್ಟಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ರಾಯಪುರಂ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿರುವ ಮಾಜಿ ಆಟೋ ಚಾಲಕ ಕೆ.ವಿ. ವಿಜಯ್ ದಾಮು.
ರಾಯಪುರಂ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ವಿಜಯ್ ದಾಮು ಅವರು ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಘಟಾನುಘಟಿಗಳನ್ನು ಮಣ್ಣುಮುಕ್ಕಿಸಿದ್ದಾರೆ.59,091 ಮತಗಳನ್ನು ಪಡೆಯುವ ಮೂಲಕ ಸುಮಾರು 14,249 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಇವರ ವಿರುದ್ಧ ಸ್ಪರ್ಧಿಸಿದ್ದ ಡಿಎಂಕೆಯ ಡಾ. ಎ. ಸುಬೈರ್ ಖಾನ್ ಮತ್ತು ಎಐಎಡಿಎಂಕೆಯ ಪ್ರಬಲ ನಾಯಕ ಡಿ. ಜಯಕುಮಾರ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
51 ವರ್ಷದ ವಿಜಯ್ ದಾಮು ಅವರು ಒಂದು ಕಾಲದಲ್ಲಿ ರಾಯಪುರಂನ ರಸ್ತೆಗಳಲ್ಲಿ ಆಟೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿ. ಪ್ರಸ್ತುತ ಆಟೋ ಕನ್ಸಲ್ಟೆನ್ಸಿ ವ್ಯವಹಾರ ನಡೆಸುತ್ತಿರುವ ಇವರು, ಕೇವಲ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. “ಸಾಮಾನ್ಯ ಆಟೋ ಚಾಲಕನೂ ಶಾಸಕನಾಗಬಹುದು” ಎಂಬ ವಿಜಯ್ ಅವರ ಆಶಯಕ್ಕೆ ಇವರು ಕನ್ನಡಿಯಾಗಿದ್ದಾರೆ.








