ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಾಮಗಾರಿಗಳಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯುಂಟು ಮಾಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಮೂಲಕ ಮುನಿಯಾಲು – ಪಡುಕೂಡುರು ಖಜಾನೆ ರಸ್ತೆ ನಿರ್ಮಾಣದ ಕಾಮಗಾರಿಯು ಪ್ರಶಾಂತ್ ಶೆಟ್ಟಿ ಮೊಳಹಳ್ಳಿ ಎಂಬವರಿಗೆ ಲಭಿಸಿತ್ತು. 2 .50 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರಿ ಕಾಮಗಾರಿಗಳನ್ನು ಬೇರೆಯವರೆಗೆ ಬಿಟ್ಟುಕೊಡಲು ಇಚ್ಛಿಸದ ಉದಯ್ಕುಮಾರ್ ಶೆಟ್ಟಿ ಅಕ್ರಮವಾದಿ ಸದರಿ ರಸ್ತೆಯನ್ನು ಅಗೆದು ಕಾಮಗಾರಿ ಆರಂಭಿಸಿದ್ದಾರೆ. ಆದರೆ ಸರ್ಕಾರಿ ಇಂಜಿನಿಯರ್ ಈ ರಸ್ತೆಯ ಟೆಂಡರ್ ಪಡೆದ ಪ್ರಶಾಂತ್ಗೆ ನೋಟಿಸ್ ನೀಡಿದ್ದಾರೆ. ಅಸಲಿಗೆ ಈ ರಸ್ತೆ ಅಕ್ರಮವಾಗಿ ಅಗೆದಿರುವುದು ಉದಯ್ ಕುಮಾರ್ ಶೆಟ್ಟಿ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್ ಶೆಟ್ಟಿ ಕಿಡಿಕಾರಿದ್ದಾರೆ.
ಬೇರೆಯವರಿಗೆ ಮಂಜೂರಾದ ಟೆಂಡರ್ನಲ್ಲಿ ಉದಯ್ಕುಮಾರ್ ಶೆಟ್ಟಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ ? ಇದೊಂದು ಕಾನೂನುಬಾಹಿರ ಚಟುವಟಿಕೆಯಲ್ಲದೇ ಮತ್ತಿನ್ನೇನು ?ಇಂತಹ ದಬ್ಬಾಳಿಕೆ ನೀತಿಯು ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಸಾಗಿದೆ. ಉದಯ್ ಕುಮಾರ್ ಶೆಟ್ಟಿ ಬೇರೆ ಗುತ್ತಿಗೆದಾರರಿಗೆ ಬೆಳೆಯಲು ಬಿಡುತ್ತಿಲ್ಲ. ಸರ್ಕಾರಿ ಸ್ವತ್ತನ್ನು ಯಾರ ಅನುಮತಿ ಪಡೆಯದೇ ಈ ರೀತಿ ಹಾಳು ಮಾಡದರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸುರೇಶ್ ಶೆಟ್ಟಿ ಹೇಳಿದ್ದಾರೆ.
ಜಿಲ್ಲಾಡಳಿತವನ್ನು ನಿರಂತರವಾಗಿ ದುರ್ಬಳಕೆ ಮಾಡುತ್ತಲೇ ಬಂದಿರುವ ಉದಯ್ ಕುಮಾರ್ ಶೆಟ್ಟಿ ಜಲ್ಲಿ, ಮರಳು, ಕೆಂಪುಗಲ್ಲು ವ್ಯಾಪಾರಸ್ಥರ ಮೇಲೆ ಒಂದಿಲ್ಲೊಂದು ಕೇಸು ಹಾಕಿಸಿ ಅವರ ಜೀವನ ನರಕಸದೃಶವಾಗಿಸಿದ್ದಾರೆ. ಈಗ ಬೇರೆ ಗುತ್ತಿಗೆದಾರರಿಗೂ ಬದುಕಲು ಬಿಡುತ್ತಿಲ್ಲ. ಆದರೆ ಇವರ ಸರ್ವಾಧಿಕಾರಿ ಧೋರಣೆಗೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ದುರಂತ. ಹೀಗಾಗಿ ಲೋಕೋಪಯೋಗಿ ಇಲಾಖೆ ಈ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕೆಂದು ಆಗ್ರಹಿಸಿದ್ದಾರೆ.
ಇಂದಿನಿಂದ ದೇಶಾದ್ಯಂತ ನೂತನ ಕಾರ್ಮಿಕ ಸಂಹಿತೆಗಳು ಜಾರಿ: ಅನುಕೂಲಗಳೇನು? ಇಲ್ಲಿದೆ ಮಾಹಿತಿ | Four New Labour Codes








