ಬೆಂಗಳೂರು : ರಾಜ್ಯ ಸರ್ಕಾರ ಜಾತಿ ಗಣತಿ ಜಾರಿಗೆ ಸಂಬಂಧಪಟ್ಟಂತೆ, ದಸರಾ ರಜೆ ವಿಸ್ತರಣೆಯಿಂದ ಕೊರತೆಯಾಗಿರುವ ಕಲಿಕಾ ಅವಧಿ ಯನ್ನು ಸರಿದೂಗಿಸಲು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಳಿದಿರುವ ಶಾಲಾ ದಿನಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಅವಧಿ (ಪೀರಿಯಡ್) ತರಗತಿ ಬೋಧನೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಸೆ.22ರಿಂದ ಅ.7ರವರೆಗೆ ಇದ್ದ ದಸರಾ ರಜೆ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ದಸರಾ ರಜೆ ಅವಧಿಯನ್ನು ಅ.18ರವರೆಗೆ ವಿಸ್ತರಿಸಲಾಗಿತ್ತು. ಇದರಿಂದ ಶಾಲಾಮಕ್ಕಳಿಗೆ ಅ.12ರ ಭಾನುವಾರ ರಜಾ ದಿನ ಹೊರತುಪಡಿಸಿ ಉಳಿದ 10 ದಿನಗಳ ಬೋಧನಾ ಅವಧಿ ಕೊರತೆಯಾಗಿದೆ.
ಪ್ರೌಢಶಾಲಾ ಮಕ್ಕಳಿಗೆ ಈ 10 ದಿನಗಳ ಪೈಕಿ ಎಂಟು ಪೂರ್ಣ ದಿನ, ಎರಡು ಅರ್ಧ ದಿನ ಸೇರಿ ಒಟ್ಟು 66 ಬೋಧನೆ ಪೀರಿಯಡ್ ಕೊರತೆಯಾಗಿದೆ. ಅದೇ ರೀತಿ ಪ್ರಾಥಮಿಕ ಶಾಲಾ ಮಕ್ಕಳಿಗೆ 74 ಪೀರಿಯಡ್ ಪಾಠದ ಕೊರತೆಯಾಗಿದೆ. ಹಾಗಾಗಿ ಇದನ್ನು ಸರಿದೂಗಿಸಲು ಫೆ.5ರವರೆಗಿನ 74 ಶಾಲಾ ದಿನಗಳಲ್ಲಿ ನಿತ್ಯ ಒಂದು ಅವಧಿ ಹೆಚ್ಚುವರಿ ತರಗತಿ ನಡೆಸಲು ಸೂಚಿಸಲಾಗಿದೆ.








