ಬೆಂಗಳೂರು: ಆಸ್ತಿ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ಅತ್ಯಂತ ಪ್ರಮುಖವಾದ ದಾಖಲೆಯಾಗಿರುವ ಋಣಭಾರ ಪ್ರಮಾಣಪತ್ರ (EC) ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ಕಾವೇರಿ 2 (Kaveri 2.0) ವೆಬ್ ಅಪ್ಲಿಕೇಶನ್ ಮೂಲಕ 2004ರ ವರ್ಷದ ಹಿಂದಿನ ಇಸಿಗಳನ್ನು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ:
ಲಾಗಿನ್ ಪ್ರಕ್ರಿಯೆ: ಮೊದಲು ಸಾರ್ವಜನಿಕರು ಕಾವೇರಿ 2 ವೆಬ್ಸೈಟ್ಗೆ ಲಾಗಿನ್ ಆಗಿ ‘Start New Application’ ಮೇಲೆ ಕ್ಲಿಕ್ ಮಾಡಬೇಕು.
ಸೇವೆ ಆಯ್ಕೆ
ಸೇವೆಗಳ ಪಟ್ಟಿಯಲ್ಲಿ ‘Online EC’ ಆಯ್ಕೆಯನ್ನು ಆರಿಸಿಕೊಂಡು, ಅಲ್ಲಿ ‘Before 01-01-2004’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಆಸ್ತಿ ವಿವರ
ನಿಮ್ಮ ಆಸ್ತಿಯು ಕೃಷಿ (Agriculture) ಅಥವಾ ಕೃಷಿಯೇತರ (Non-Agriculture) ಆಸ್ತಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಕೃಷಿ ಭೂಮಿಯಾಗಿದ್ದರೆ ಮ್ಯಾಪ್ (Map) ಮೂಲಕ ಅಥವಾ ಮ್ಯಾನುವಲ್ ಆಗಿ ವಿವರಗಳನ್ನು ನೀಡಬಹುದು.
ಮಾಹಿತಿ ಸಲ್ಲಿಕೆ
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ಗಳನ್ನು ನಿಖರವಾಗಿ ನಮೂದಿಸಬೇಕು. ಆಸ್ತಿಯ ಚಕ್ಕುಬಂದಿ (Boundary details) ಮತ್ತು ವಿಸ್ತೀರ್ಣವನ್ನು ಸ್ಪಷ್ಟವಾಗಿ ದಾಖಲಿಸುವುದು ಕಡ್ಡಾಯ.
ಇ-ಸೈನ್ (e-Sign): ಅರ್ಜಿಯನ್ನು ಸಲ್ಲಿಸಲು ಆಧಾರ್ ಸಂಖ್ಯೆಯ ಮೂಲಕ ಓಟಿಪಿ (OTP) ಪಡೆದು ಇ-ಸೈನ್ ಮಾಡಬೇಕಾಗುತ್ತದೆ
ಶುಲ್ಕ ಪಾವತಿ
ಅರ್ಜಿ ಸಲ್ಲಿಸಿದ ನಂತರ ಉಪನಂದನಾಧಿಕಾರಿಗಳು (Sub-Registrar) ಅದನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ಪೂರ್ಣಗೊಂಡ ನಂತರ ಆನ್ಲೈನ್ನಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ. ಶುಲ್ಕ ಪಾವತಿಸಿದ ಬಳಿಕ ಇಸಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರಮುಖ ಸೂಚನೆ:
ಅರ್ಜಿದಾರರು ಮಾಹಿತಿಯನ್ನು ಒದಗಿಸುವಾಗ ಅತ್ಯಂತ ನಿಖರವಾಗಿರಬೇಕು. ತಪ್ಪು ಮಾಹಿತಿ ನೀಡಿದಲ್ಲಿ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಈ ಹೊಸ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಉಪನಂದನಾಧಿಕಾರಿಗಳ ಕಚೇರಿಗೆ ಪದೇ ಪದೇ ಅಲೆಯುವುದು ತಪ್ಪಿದಂತಾಗಿದೆ.








