ಬಳ್ಳಾರಿ : ಸಮುದಾಯಗಳಲ್ಲಿ ಹೆಚ್ಚಾಗಿ ನಾಯಿ ಕಡಿತ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವಿಸಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಬೇಕಾದ ಜಾಗೃತಿ ಕಾರ್ಯಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಯಿ, ಬೆಕ್ಕು, ಇತರೆ ಯಾವುದೇ ಪ್ರಾಣಿಗಳು ಕಚ್ಚಿದಾಗ ರೇಬೀಸ್ ಕಾಯಿಲೆ ಬರುವ ಸಾಧ್ಯತೆಯಿದ್ದು, ಪ್ರಮುಖವಾಗಿ ನಾಯಿಗಳ ಕಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದರಿಂದ ನಿರ್ಲಕ್ಷ್ಯ ಮಾಡದೇ, ಕಚ್ಚಿದ ಅಥವಾ ಪರಚಿದ ಜಾಗವನ್ನು ಸೋಪು, ನೀರಿನಿಂದ ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯಲು ಸೂಚಿಸಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರು ಸಹ ಸಾಕಿದ ಅಥವಾ ಯಾವುದೇ ಅಪರಿಚಿತ ನಾಯಿ, ಯಾವುದೇ ಪ್ರಾಣಿ ಕಚ್ಚಿದಲ್ಲಿ ನಿರ್ಲಕ್ಷ್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಅಗತ್ಯ ಚುಚ್ಚುಮದ್ದು ಪಡೆಯಬೇಕು. ಇದರಿಂದ ಸಂಭಾವ್ಯ ರೇಬಿಸ್ ಖಾಯಿಲೆಯನ್ನು ತಡೆಯುವುದರ ಜೊತೆಗೆ ವ್ಯಕ್ತಿಯ ಜೀವವನ್ನು ಕಾಪಾಡುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಭೇಟಿ ನೀಡುವ ಸಮಯದಲ್ಲಿ ಅಥವಾ ಯಾವುದೇ ಸಮೀಕ್ಷೆಯ ಸಂದರ್ಭದಲ್ಲಿ ನಾಯಿ ಕಡಿತ ಪ್ರಕರಣಗಳ ಕುರಿತು ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯುವುದರ ಜೊತೆಗೆ ನಾಯಿ ಕಡಿತದ ಕುರಿತು ಮುನ್ನೆಚ್ಚರಿಕೆ ಕ್ರಮವಹಿಸಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಕುರಿತು ಜಾಗೃತಿ, ಮಾಹಿತಿ ಬಿಂಬಿಸುವ ಫ್ಲೆಕ್ಸ್ ಪ್ರದರ್ಶನ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮ ಪಂಚಾಯಿತಿ ಒಳಗೊಂಡು ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ವಾಹನಗಳಲ್ಲಿ ನಾಯಿ ಕಡಿತದ ಕುರಿತು ಜಾಗೃತಿ ಮಾಹಿತಿ ಇರುವ ಆಡಿಯೋ ಜಿಂಗಲ್ ಪ್ರತಿನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸಾರ ಮಾಡಲು ತಿಳಿಸಬೇಕು. ಪ್ರತಿ ಶನಿವಾರ ನಡೆಯುವ ವಾರದ ಸಭೆಯಲ್ಲಿ ಕ್ಷೇತ್ರ ಸಿಬ್ಬಂದಿಯವರಿಗೆ ನಾಯಿ ಕಡಿತದ ಕುರಿತು ಕ್ಷೇತ್ರ ವರದಿ ಮಾಹಿತಿಯ ಬಗ್ಗೆ ಚರ್ಚಿಸಬೇಕು ಎಂದರು.
ಸಾರ್ವಜನಿಕರು ಮನೆಯ ಸುತ್ತ-ಮುತ್ತ ಓಣಿ-ಬೀದಿಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲಬಾರದು. ಇದರಿಂದ ಬೀದಿ ನಾಯಿ ಹಾವಳಿ ಜಾಸ್ತಿಯಾಗುತ್ತದೆ ಹಾಗೂ ಚಿಕ್ಕ ಮಕ್ಕಳು ಮನೆಯ ಹೊರಗಡೆ ಇರುವಾಗ ತಂದೆ-ತಾಯಿ ಗಮನಹರಿಸಬೇಕು. ಮಕ್ಕಳ ಕೈಯಲ್ಲಿ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳಲು ಬಂದು ನಾಯಿ ಕಚ್ಚುವ ಅಪಾಯ ಹೆಚ್ಚಾಗಿರುತ್ತದೆ. ಮುಖ್ಯವಾಗಿ ನಾಯಿ ಕಚ್ಚಿದ ಸಂದರ್ಭದಲ್ಲಿ ಮನೆ ಮದ್ದು ಅಥವಾ ನಾಟಿ ವೈದ್ಯರ ಹತ್ತಿರ ಹೋಗದೇ ಹತ್ತಿರದ ಆರೋಗ್ಯ ಕೇಂದ್ರಗಳ ಬಳಿ ತೆರಳಿ ಲಸಿಕೆ ಪಡೆಯಲು ತಿಳಿಸಿದರು.
ಶೇ.100 ರಷ್ಟು ತಡೆಗಟ್ಟಬಹುದಾದ ಖಾಯಿಲೆಯಾಗಿರುವ ರೇಬೀಸ್ ತಡೆಗೆ ನಾಯಿ ಕಚ್ಚಿದ ನಂತರ ಗಾಯವನ್ನು ಹರಿಯುವ ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್ಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ವೈದ್ಯರ ಸಲಹೆ ಮೇರೆಗೆ 1ನೇ ದಿವಸ, 3ನೇ ದಿವಸ, 7ನೇ ದಿವಸ, 14ನೇ ದಿವಸ ಮತ್ತು 28ನೇ ದಿವಸ ಸಂಪೂರ್ಣವಾಗಿ ಎಲ್ಲಾ 5 ಡೋಸ್ಗಳನ್ನು ಪಡೆಯುವುದರ ಮೂಲಕ ರೇಬಿಸ್ ತಡೆಗಟ್ಟಬಹುದು ಎಂದರು.
ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎ.ಆರ್.ವಿ ಲಸಿಕೆ ಲಭ್ಯತೆ ಇಟ್ಟುಕೊಳ್ಳಬೇಕು. ಪ್ರಸ್ತುತ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣಕ್ಕೆ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಲಸಿಕೆ ಲಭ್ಯವಿದ್ದು, ಆರೋಗ್ಯ ಸಿಬ್ಬಂದಿ ರೋಗಿಯ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಬಳಿಕ ಅಗತ್ಯ ದಾಖಲೆ ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾದಿಕಾರಿ ಡಾ.ಮರಿಯಂಬಿ ವಿ.ಕೆ., ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಸದಾಶಿವ ಉಪ್ಪಾರ, ವೈದ್ಯಾಧಿಕಾರಿಗಳಾದ ಡಾ.ಶ್ರೀಧರ್, ಡಾ.ದುರುಗಪ್ಪ, ಡಾ.ಕೊಟ್ರೇಶ್, ಡಾ.ಅನಿಲ್ ಕುಮಾರ್, ಡಾ.ಗೋಪಾಲ್ರಾವ್, ಡಾ.ಜೆಷನ್ ವಾಸಿಫ್, ಡಾ.ವಿಶಾಲಾಕ್ಷಿ ಹಾಗೂ ಸರ್ವೇಕ್ಷಣಾಧಿಕಾರಿ ಘಟಕದ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು.








