ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ಸಾರ್ವಜನಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ಸೆಪ್ಟೆಂಬರ್.22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ.
ಈಗಾಗಲೇ ಪ್ರತಿ ಮನೆಗೂ ಸರ್ಕಾರದಿಂದ ನಿಯೋಜಿತವಾಗುವ ಗಣತಿದಾರರು ಮೊಬೈಲ್ ಆಪ್ ಮುಖೇನ ಸಮೀಕ್ಷೆ ಕೈಗೊಳ್ಳಲಿದ್ದು, ಆ ಸಮಯದಲ್ಲಿ ಸಾರ್ವಜನಿಕರು ಸೂಕ್ತ ಮಾಹಿತಿ ಒದಗಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಹಾಗೂ ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಹಾಗೂ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಬುನಾದಿ ಹಾಕಲು ಮುಕ್ತ ಮನಸ್ಸಿನಿಂದ ಸಹಕಾರ ನೀಡುವಂತೆ ಸರ್ಕಾರ ಕೋರಿದೆ.
ಈ ಸಮೀಕ್ಷೆಯು ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ನೀತಿ ನಿರೂಪಣೆಗೆ ಆಧಾರವಾಗಿರುತ್ತದೆ. ಹೀಗಾಗಿ ಸಮೀಕ್ಷೆಯನ್ನು ಸಂಪೂರ್ಣ ಯಶಸ್ವಿಗೊಳಿಸುವುದು ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ.
ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಬಹುದು. ಆನ್ ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಮೀಕ್ಷೆ ಆರಂಭವಾಗುವ ಪೂರ್ವದಲ್ಲೇ ಆಶಾ ಕಾರ್ಯಕರ್ತರು ಎಲ್ಲರ ಮನೆಗಳಿಗೆ ಹೋಗಿ ಸಮೀಕ್ಷೆಯ ನಮೂನೆಯನ್ನು ಒದಗಿಸಲಿದ್ದಾರೆ. ಇದರಿಂದ ಸರಿಯಾದ ಮಾಹಿತಿಯನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.
ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿ ಅಕ್ಟೋಬರ್ 7 ರವರೆಗೆ ನಡೆಯುವ ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ಮಾಡುವುದರಿಂದ, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡಿನ ಸಂಖ್ಯೆ, ವಿಕಲಚೇತನರಾಗಿದ್ದರೆ UID ಕಾರ್ಡ್ ಅಥವಾ ಅಂಗವಿಕಲರ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿದ್ದರೆ ಸಮೀಕ್ಷೆ ಸುಲಭವಾಗುತ್ತದೆ ಮತ್ತು ವೇಗವಾಗುತ್ತದೆ.
ಕುಟುಂಬದ ಎಲ್ಲಾ ಸದಸ್ಯರೂ ತಮ್ಮ ಆಧಾರ್ ಕಾರ್ಡ್ ಗಳೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುಬೇಕು. ಸಮೀಕ್ಷೆ ಸಮಯದಲ್ಲಿ ಇಕೆವೈಸಿ ಮಾಡುವಾಗ ಆ ಸದಸ್ಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಬರುವ ಒಟಿಪಿಯನ್ನು ತಿಳಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿದ್ದಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಹೊಸ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು.
ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಕೋರಿರುವ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ವರಮಾನ, ಆರ್ಥಿಕ ಸ್ಥಿತಿಗಳ ವಿವರಗಳು, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ಎಲ್ಲಾ ವಿವರಗಳ ಮಾಹಿತಿಯನ್ನು ನೀಡುವಂತೆ ಸರ್ಕಾರ ಮನವಿ ಮಾಡಿದೆ.
ಸಮೀಕ್ಷೆಯ ಪ್ರಶ್ನಾವಳಿಗಳ ಬಗ್ಗೆ ಅರಿವು ಮೂಡಿಸಲು NCC (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಪದವಿ ವಿಧ್ಯಾರ್ಥಿಗಳ ಮೂಲಕ ಸಮೀಕ್ಷಾ ಪೂರ್ವ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಸಚಿವರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಅಥವಾ Website ವಿಳಾಸ https://kscbc.karnataka.gov.in ರಲ್ಲಿ ಮಾಹಿತಿ ಪಡೆಯಬಹುದು ಎಂದಿದೆ.







