ಬೆಂಗಳೂರು : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಗೆ ಒಳಗಾದ ಚಿಕಿತ್ಸೆಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಚಿಕಿತ್ಸೆ ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಶುಕ್ರವಾರ ಮಿಂಟೋ ಆಸ್ಪತ್ರೆಯಲ್ಲಿ ಸುರಕ್ಷಿತ ದೀಪಾವಳಿ ಜಾಗೃತಿ ಕುರಿತು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮಕ್ಕಳು ಪಟಾಕಿಯಿಂದ ದೂರವಿದ್ದಷ್ಟೂ ಒಳ್ಳೆಯದು. ಪಟಾಕಿಯಿಂದ ಗಾಯ ಮಾಡಿಕೊಳ್ಳುವವರ ಪೈಕಿ ಶೇ. 40ರಷ್ಟು ಮಕ್ಕಳಾಗಿದ್ದು, ಅದರಲ್ಲೂ ವಿಶೇಷವಾಗಿ 14 ವರ್ಷದೊಳಗಿನವರಾಗಿದ್ದಾರೆ. ಅದರಲ್ಲೂ ಗಂಡು ಮಕ್ಕಳು ಹೆಚ್ಚಾಗಿ ಪಟಾಕಿ ಅನಾಹುತಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು.
‘ಪ್ರತಿ ವರ್ಷ ದೀಪಾವಳಿಯಲ್ಲಿ 50 – 60 ಜನರು ಕಣ್ಣಿನ ಗಾಯದ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 30 ಹಾಸಿಗೆ ಮೀಸಲಿಡಲಾಗಿದೆ. ಮುಂದಿನ ಒಂದು ವಾರ ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. 33 ವೈದ್ಯರ ಜತೆಗೆ ಪಿಜಿ ವಿದ್ಯಾರ್ಥಿಗಳು ಕೂಡ ಈ ಸಂದರ್ಭದಲ್ಲಿ ಲಭ್ಯವಿರಲಿದ್ದಾರೆ. ಮಕ್ಕಳು ಮತ್ತು ಮಹಿಳೆಯರಿಗೆ ಕೆಳ ಮಹಡಿಯಲ್ಲಿ ಹಾಗೂ ಪುರುಷರಿಗೆ ಮೊದಲನೇ ಮಹಡಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಪಟಾಕಿ ಸಿಡಿತ ಪ್ರಕರಣಗಳಲ್ಲಿ ಶೇ. 38ರಷ್ಟು ಕೈ ಮತ್ತು ಬೆರಳುಗಳಿಗೆ ಗಾಯವಾದರೆ, ಶೇ. 19 ರಷ್ಟು ಕಣ್ಣಿನ ಗಾಯಕ್ಕೆ ಒಳಗಾಗುತ್ತಿದ್ದಾರೆ. ಕಳೆದ ವರ್ಷ 34 ಪ್ರಕರಣಗಳು ವರದಿಯಾಗಿದ್ದು, 7 ಜನರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರಿಗೆ ಸಂಪೂರ್ಣ ದೃಷ್ಟಿಯೇ ಹೋಗಿದೆ’ ಎಂದರು. ‘ಸಾರ್ವಜನಿಕರು ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ವಹಿಸುವುದು ಅಗತ್ಯ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಕೈಗೊಳ್ಳುವುದು ಉತ್ತಮ. ಹೀಗಾಗಿ, ಮೊದಲೇ ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.