ಪ್ರಸ್ತಕ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕಿನ ರೈತರು ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಕೋರಿದ್ದಾರೆ.
ರೈತರು ಬೆಳೆಗಳಿಗೆ ವಿಮೆ ಮಾಡಿಸುವುದರಿಂದ ನೈಸರ್ಗಿಕ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭದಲ್ಲಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ಅನುಕೂಲವಾಗಲಿದೆ ಹಾಗೂ ಘಟನೆ ಸಂಭವಿಸಿದ 72 ಗಂಟೆಗಳೊಳಗಾಗಿ ಕೃಷಿ ಇಲಾಖೆಗೆ ಅಥವಾ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ಇದು ಪರಿಹಾರ ಪಡೆಯಲು ಅತ್ಯಗತ್ಯ ಹಂತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂಗಾರು ಬೆಳೆಗಳಾದ ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ ಎಕರೆಗೆ 247 ರೂ., ನೀರಾವರಿ ಸೂರ್ಯಕಾಂತಿ ಎಕರೆಗೆ 296 ರೂ., ಕುಸುಬೆ (ಮಳೆ ಆಧಾರಿತ) ಬೆಳೆಗೆ ಎಕರೆಗೆ 188 ರೂ., ನೀರಾವರಿ ಜೋಳ ಎಕರೆಗೆ 275 ರೂ. ಹಾಗೂ ಮೆಕ್ಕೆಜೋಳ ಬೆಳೆಗೆ 391 ರೂ. ಇದ್ದು, ಡಿ.15 ನೋಂದಣಿಗೆ ಕೊನೆಯ ದಿನವಾಗಿದೆ.
ಅದೇರೀತಿಯಾಗಿ ಕಡಲೆ (ಮಳೆ ಆಧಾರಿತ) ಬೆಳೆಗೆ 211 ರೂ., ಕಡಲೆ (ನೀರಾವರಿ) ಎಕರೆಗೆ 234 ರೂ. ಇದ್ದು, ವಿಮೆಗೆ ನೋಂದಾಯಿಸಿಕೊಳ್ಳಲು ಡಿ.31 ಕೊನೆಯ ದಿನವಾಗಿದೆ.
ಬೇಸಿಗೆ ಹಂಗಾಮಿನ ನೀರಾವರಿ ಭತ್ತ (ರೂ.566), ಶೇಂಗಾ (ನೀರಾವರಿ) ಎಕರೆಗೆ 399 ರೂ. ಹಾಗೂ ಸೂರ್ಯಕಾಂತಿ (ನೀರಾವರಿ) ಎಕರೆಗೆ 296 ರೂ. ಇದ್ದು, 2026 ರ ಫೆಬ್ರವರಿ 27 ನೋಂದಣಿಗೆ ಕೊನೆಯ ದಿನವಾಗಿದೆ.
ರೈತರು ಬೆಳೆ ವಿಮೆ ನೋಂದಣಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ/ರೈತರು ತಮ್ಮ ವ್ಯವಹಾರದ ಬ್ಯಾಂಕ್‌ಗಳಿಗೆ ಸಂಪರ್ಕಿಸಬಹುದು.ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








