ಬೆಂಗಳೂರು: ಆ ಮೂಕಪ್ರಾಣಿಗಳ (ಹಸುಗಳ) ಕೆಚ್ಚಲು ಕೊಯ್ಯುವ ಘನಂದಾರಿ ಕೆಲಸ ಯಾರು ಮಾಡಿದ್ದಾರೆ ಎಂಬುದನ್ನು ಮೊದಲು ಬಯಲಿಗೆ ತರಬೇಕು. ಇವತ್ತು ಯಾರೋ ಒಬ್ಬನನ್ನು ಅರೆಸ್ಟ್ ಮಾಡಿದ್ದಾಗಿ ಹೇಳುತ್ತಿದ್ದಾರೆ. ಇದು ಕೇಸನ್ನು ಮುಚ್ಚಿ ಹಾಕುವ ಕೆಲಸದಂತೆ ಅನಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಡೆದ ಘಟನೆಗಳನ್ನು ಪ್ರಸ್ತಾಪ ಮಾಡಿದರೆ ಅದರಲ್ಲಿ ರಾಜಕೀಯ ಏನಿದೆ ಎಂದು ಮುಖ್ಯಮಂತ್ರಿಗಳನ್ನು ಕೇಳಿದರು. ಜಮೀರ್ ಅಹ್ಮದ್ ಅವರೇ ನೀವು 3 ಹಸುಗಳನ್ನು ಕೊಡಿಸದಿದ್ದರೂ ಪರವಾಗಿಲ್ಲ. ನೀವು 100 ಹಸುಗಳನ್ನು ಕೊಟ್ಟರೂ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಇದಕ್ಕೆ ಪ್ರೇರಣೆ ಯಾರು? ಓಲೈಕೆ ರಾಜಕಾರಣದಿಂದ ಈ ರಾಜ್ಯದಲ್ಲಿ ಏನಾಗುತ್ತಿದೆ? ಇವುಗಳನ್ನು ನಾವು ಗಮನಿಸಬೇಕಿದೆ. ಇದೊಂದು ಕೆಟ್ಟ ಪರಂಪರೆಗೆ ಕಾಂಗ್ರೆಸ್ ಸರಕಾರ ನಾಂದಿ ಹಾಕಿದೆ. ಇಲ್ಲಿ ಸಂಪೂರ್ಣವಾಗಿ ಕಾನೂನು- ಸುವ್ಯವಸ್ಥೆ ಕೆಟ್ಟು ಹೋಗಿದೆ. ತಮ್ಮ ತಮ್ಮ ಅಧಿಕಾರಕ್ಕಾಗಿ ಕಾದಾಟದಲ್ಲಿ ಈ ಸರಕಾರ ರಾಜ್ಯವನ್ನೇ ಮರೆತಿದೆ ಎಂದು ಆಕ್ಷೇಪಿಸಿದರು.
ಇವತ್ತು ಗುತ್ತಿಗೆದಾರರ ಸಂಘವು 7 ಸಚಿವರಿಗೆ ಪತ್ರ ಬರೆದಿದೆ. ಅವರ ಸಮಸ್ಯೆಗಳನ್ನು ಹೇಳಿಕೊಂಡಿದೆ. ನಾವಿಷ್ಟು ಸಾರಿ ಕೇಳಿದರೂ ಗಮನ ಹರಿಸದ ಕಾರಣ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ. ಇದು ಕಿವುಡ ಸರಕಾರ, ಕಿವುಡು ಮಂತ್ರಿಗಳಿಗೆ ಯಾರು ಹೇಳಬೇಕು ಎಂದು ಕೇಳಿದರು. ಕಿವುಡು ಕಿವುಡು ಎಂದರೆ ಇವರು ತವುಡು ತವುಡು ಎಂದರಂತೆ ಎಂದು ಗಾದೆಯನ್ನೂ ಪ್ರಸ್ತಾಪಿಸಿದರು.
ಗುತ್ತಿಗೆದಾರರು ಕೆಲಸ ಮಾಡಿಲ್ಲವೇ? ಯಾರಪ್ಪನ ಮನೆಯಿಂದ ಹಣ ಕೊಡುತ್ತೀರಿ? ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರಶ್ನಿಸಿದರು. ಕೆಲಸ ಮಾಡಿದ್ದಾರಲ್ಲ? ಅದರ ದುಡ್ಡು ಕೇಳುತ್ತಿದ್ದಾರೆ; ಅದನ್ನು ಕೊಡಿ ಎಂದು ತಿಳಿಸಿದರು.
2014ರಲ್ಲಿ ನಿಮ್ಮ ಸರಕಾರ ಹೋದಾಗ 2 ಲಕ್ಷ ಕೋಟಿ ಬಾಕಿ ಇಡಲಿಲ್ಲವೇ? ನಮ್ಮ ಸರಕಾರ ಬಂದು ಅದೆಲ್ಲ ತೀರಿಸಲಿಲ್ಲವೇ? ಇದು ಹೇಳುವ ಮಾತಲ್ಲ ಎಂದು ಟೀಕಿಸಿದರು. ಯಾವುದೇ ಸರಕಾರ ಮಾಡಿದ ಕೆಲಸವನ್ನು ತೆಗಳಿಕೊಂಡು ಸರಕಾರ ನಡೆಸುವುದಲ್ಲ; ಅವರಿಗಿಂತ ಚೆನ್ನಾಗಿ ಮಾಡಿ ಒಳ್ಳೆಯ ಹೆಸರು ಪಡೆದುಕೊಳ್ಳಿ; ಈ ಕೆಟ್ಟ ಪರಂಪರೆಯನ್ನು ಮುಂದುವರೆಸದಿರಿ ಎಂದು ಮನವಿ ಮಾಡಿದರು.
ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ನೀವು ಯಾವ ಮಟ್ಟಕ್ಕೆ ಈ ರಾಜ್ಯವನ್ನು ಕೊಂಡೊಯ್ದಿದ್ದೀರಿ ಎಂಬುದು ಗುತ್ತಿಗೆದಾರರ ಪತ್ರದಿಂದ ಗೊತ್ತಾಗಿದೆ. ನಿಮ್ಮ ಮೇಲೆ ಎಲ್ಲ ಕಡೆಯಿಂದ ಶೇ 60 ಕಮಿಷನ್‍ನ ಆರೋಪ ಇದೆ. ಗುತ್ತಿಗೆದಾರರಿಗೆ ಬಿಲ್ ಸಿಗದೆ ಇರುವ ಆತಂಕ ಇರುವ ಕಾರಣ ವಿವರ ಹೊರಗಡೆ ತಿಳಿಸುತ್ತಿಲ್ಲ; ಆದರೆ, ನಿಜಕ್ಕೂ ಶೇ 60 ಕಮಿಷನ್ ಇದೆ ಎಂದು ಟೀಕಿಸಿದರು.
ಹಗ್ಗ ಜಗ್ಗಾಟದಲ್ಲಿ ಹಗ್ಗವೇ ಕಿತ್ತು ಹೋಗಲಿದೆ..
ಆ ಗುತ್ತಿಗೆದಾರರಿಗೆ ಬೇರೆ ದಾರಿ ಇಲ್ಲ; ಬಾಯಿ ಬಿಟ್ಟರೆ ಅಧಿಕಾರಿಗಳು, ರಾಜಕಾರಣಿಗಳು ತೊಂದರೆ ಕೊಡುತ್ತಾರೆ. ಇಂಥ ಭ್ರಷ್ಟ ಸರಕಾರ ಇವರದೇ ಒಳಬೇಗುದಿಯಿಂದ ಆದಷ್ಟು ಬೇಗನೆ ಹೋಗುವ ಪರಿಸ್ಥಿತಿ ಇದೆ. ಇದು ಸ್ವಲ್ಪ ದಿನ ಇರಬಹುದು ಎಂದುಕೊಂಡಿದ್ದೆವು. ಆದರೆ, ಹಗ್ಗ ಜಗ್ಗಾಟದಲ್ಲಿ ಹಗ್ಗವೇ ಕಿತ್ತು ಹೋಗಲಿದೆ ಎಂದು ವಿಶ್ಲೇಷಿಸಿದರು.
BREAKING NEWS: ‘ಜಪಾನ್’ನಲ್ಲಿ 6.9 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ | Earthquake Strikes In Japan
ತೆರಿಗೆ ಹಂಚಿಕೆಯ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ಬಿಜೆಪಿಗರು ‘ದೆಹಲಿ ಗುಲಾಮ’ರಾಗಿದ್ದಾರೆ: ಸಿಎಂ ಸಿದ್ಧರಾಮಯ್ಯ