ನೂತನ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಬಳಿಕ 48 ದಿನಗಳ ಮಂಡಲೋತ್ಸವ ನಡೆಯಲಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಶ್ರೀ ಪೇಜಾವರ ಮಠಾ ಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಈ ಮಂಡಲೋತ್ಸವ ಜರುಗಲಿದೆ.
ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ದೇಶದ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಇವರ ಜತೆಗೆ ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ಮುಂದಾಳ್ತನದಲ್ಲಿ ಅನೇಕ ವಿದ್ವಾಂಸರೊಂದಿಗೆ ಮಂಡಲೋತ್ಸವ ನೆರವೇರಲಿದೆ. ಮೊದಲ 44 ದಿನ ನಿತ್ಯವೂ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ. ಪ್ರತಿನಿತ್ಯ ಸಂಜೆ ಉತ್ಸವ ನಡೆಯಲಿದೆ. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರಗಲಿದೆ. ರಾಮರಾಜ್ಯ ಪರಿಕಲ್ಪನೆಯಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಈ ಅವಧಿಯಲ್ಲಿ ಆ ಸಮಿತಿಗಳು ರಾಮರಾಜ್ಯ ಪರಿಕಲ್ಪನೆಯಡಿ ಕೆಲಸ ಮಾಡಲು ಅಯೋಧ್ಯೆಗೆ ಬಂದು ಸಂಕಲ್ಪ ಮಾಡಬಹುದು ಎಂಬುದಾಗಿ ಪೇಜಾವರ ಶ್ರೀಗಳು ಈ ಹಿಂದೆ ಅನುಗ್ರಹ ಆಶೀರ್ವಾದದಲ್ಲಿ ತಿಳಿಸಿದ್ದರಾಗಿದೆ.