ಬೆಂಗಳೂರು: ಬೇರುಮಟ್ಟದಲ್ಲಿ ಸರ್ಕಾರಿ ನೌಕರರೇ ಸರ್ಕಾರವಿದ್ದಂತೆ. ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ನೌಕಕರು ಸೇತುವೆಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನೌಕರರು ಮಾಡುತ್ತಿದ್ದಾರೆ. ಹಾಗಾಗಿ ಪಂಚತತ್ವಗಳ ಅಳವಡಿಸಿಕೊಂಡು ಕೆಲಸ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ 2025 ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಸರ್ಕಾರಿ ಅಧಿಕಾರಿ/ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಹಾಗೂ 371( ಜೆ) ನಿಮಮಾವಳಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾರ್ವಜನಿಕರಿಗೆ ಸರ್ಕಾರ ಯೋಜನೆಗಳ ನೀತಿಗಳ ಬಗ್ಗೆ ನೌಕರರೇ ತಿಳುವಳಿಕೆ ನೀಡಬೇಕಾಗುತ್ತದೆ. ಇತ್ತೀಚಿನ ಸಾಮಾಜಿಕ ಹಾಗೂ ಶೈಕ್ಷಣಿಕ ಸರ್ವೆ ಮಾಡುವಲ್ಲಿ ಸರ್ಕಾರಿ ನೌಕರರು ಪ್ರಮುಖ ಪಾತ್ರವಹಿಸಿದ್ದಾರೆ. ದಸರಾ ಹಾಗೂ ದೀಪಾವಳಿಯಂತ ಹಬ್ಬಗಳಿಗೂ ಕೂಡಾ ರಜೆ ಇಲ್ಲದೇ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಸುಮಾರು 3 ಲಕ್ಷಕ್ಕೂಅಧಿಕ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಆದರೆ, ನೌಕರರು ಮಾಡಿದ ಕಟ್ಟುನಿಟ್ಟಿನ ಸರ್ವೆ ಮೂಲಕ ಆ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಕೊರೋನಾದಂತ ಪರಿಸ್ಥಿತಿಯಲ್ಲಿಯೂ ಕೂಡಾ ಸಾರ್ವಜನಿಕರ ಸೇವೆ ಮಾಡಿದ್ದಾರೆ ಎಂದರು.
ಸ್ವತಂತ್ರ ದಿನಾಚರಣೆ ಹಾಗೂ ಪ್ರಜಾತಂತ್ರ ದಿನಾಚರಣೆ ಸಂದರ್ಭ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಸರ್ಕಾರಿ ರಜೆ ನೀಡಬಾರದು ಎನ್ನುವುದು ನನ್ನ ವೈಯಕ್ತಿಕ ವಿಚಾರ. ಈ ವಿಚಾರದ ಹಿಂದೆ ಜೀವನದ ಗುಣಮಟ್ಟ (ಕ್ವಾಲಿಟಿ ಆಫ್ ಲೈಫ್) ಸುಧಾರಣೆಯಾಗಬೇಕು ಎನ್ನುವ ನಿರ್ಧಾರವಿದೆ. ನೌಕರರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುವುದು ಸೇರಿದಂತೆ ಕೆಲ ವಿಚಾರದಲ್ಲಿ ನಾನು ವಿದೇಶದ ನೀತಿ ನಿಯಮಾವಳಿಯಂತೆ ಐದು ಕೆಲಸದ ದಿನಗಳನ್ನಾಗಿ ಮಾಡಿ ಉಳಿದ ದಿನಗಳಲ್ಲಿ ಒಂದೊಂದು ತಾಸು ಕೆಲಸದ ಅವಧಿ ವಿಸ್ತರಿಸುವಂತೆ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೆ. ಈಗಲೂ ಕೂಡಾ ಐದು ದಿನದ ಕೆಲಸದ ಅವಧಿಯನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಿದ್ದೇನೆ ಎಂದರು.
ತಾಳ್ಮೆ, ಸಮರ್ಪಣಾ ಮನೋಭಾವ, ಕರ್ತವ್ಯನಿಷ್ಠೆ ಯಂತ ಗುಣಗಳನ್ನು ಸರ್ಕಾರಿ ನೌಕರರು ಮೈಗೂಡಿಸಿಕೊಳ್ಳಬೇಕು ಎಂದು ನೌಕರರಿಗೆ ಕರೆ ನೀಡಿದ ಸಚಿವರು, ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗೆ ಪದೇ ಪದೇ ಅಲೆದಾಡದಂತೆ ಕೆಲಸ ಮಾಡಿಕೊಡಿ. ಕೆಲಸ ಆಗುವುದಿದ್ದರೆ ಆಗುತ್ತದೆ ಎಂದು ಹೇಳಿ. ಕೆಲಸ ಆಗದಿದ್ದರೂ ಆಗುತ್ತದೆ ಎಂದು ಸುಳ್ಳು ಹೇಳಿ ಸಾರ್ವಜನಿಕರಿಗೆ ಅಲೆದಾಡಿಸಬೇಡಿ. ನೇರವಾಗಿ ವಾಸ್ತವ ಹೇಳಿ ಎಂದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾನೂ ಸೇರಿದಂತೆ ನೌಕರರು ಸೇವಕರಾಗಿಯೇ ಕೆಲಸ ಮಾಡಬೇಕಾಗುತ್ತದೆ. ನಾವು ಇಚ್ಛೆಪಟ್ಟು ಈ ಚೌಕಟ್ಟಿನೊಳಗೆ ಬಂದಾಗ ಜನರ ಏಳಿಗೆ ಹಾಗೂ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಪ್ರಗತಿಯ ಉದ್ದೇಶವಿರಬೇಕು. ನೌಕರರು ಬಸವ ತತ್ವ ಅಳವಡಿಸಿಕೊಳ್ಳಬೇಕು. ಕಾಯಕ ಹಾಗೂ ದಾಸೋಹ ತತ್ವದಲ್ಲಿ ಸಾರ್ವಜನಿಕರ ಹಿತ ಅಡಗಿದೆ. ಪರಿಣಾಮಕಾರಿಯಾಗಿ ನೌಕರರು ಕೆಲಸ ಮಾಡಿದರೆ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಸ್ಪಂದನೆ, ಸಮನ್ವಯತೆ, ಸಮಯಪ್ರಜ್ಞೆ, ಅನುಷ್ಠಾನ ಹಾಗೂ ಹೊಣೆಗಾರಿಕೆಯಂತ ಪಂಚ ತತ್ವಗಳನ್ನು ಸರ್ಕಾರಿ ನೌಕರರು ಮೈಗೂಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ ಸಚಿವರು, ಸರ್ಕಾರ ನೌಕರರು ಬುನಾದಿಯಂತೆ. ಬುನಾದಿ ಭದ್ರವಾಗಿದ್ದರೆ ಕಟ್ಟಡವೂ ಕೂಡಾ ಸುಭದ್ರವಾಗಿರುತ್ತದೆ.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ರಾಜ್ಯ ಸರಕಾರಿ ನೌಕರರು ಆರ್ ಎಸ್ ಎಸ್ ಪಥಸಂಚಲನಿಂದ ದೂರು ಉಳಿಯಬೇಕು ಎಂದು ಕಿವಿ ಮಾತು ಹೇಳಿ, ಅಂದು ಬಸವಣ್ಣನವರಿಗೆ ತೊಂದರೆ ಕೊಟ್ಟವರೇ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ರಾಜ್ಯದ ಹಾಗೂ ದೇಶದ ಎಲ್ಲಾ ವರ್ಗದವರೂ ಸಚಿವರೊಂದಿಗೆ ಇದ್ದಾರೆ. ಹಾಗಾಗಿ, ಅವರು ತಮ್ಮ ವಿಚಾರಧಾರೆಯ ಮೂಲಕ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಮೂವತ್ತು ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೌಕರರ ಭವನ ನಿರ್ಮಾಣಕ್ಕಾಗಿ ನಿವೇಶನ ಪಡೆಯಲು ಸುಮಾರು ರೂ 2.50 ಕೋಟಿ ಶುಲ್ಕ ವಿಧಿಸಲಾಗಿದೆ. ಆದರೆ, ಅಷ್ಟೊಂದು ಹಣ ನೀಡಲು ನೌಕಕರ ಸಂಘಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಸಂಪೂರ್ಣ ವಿನಾಯಿತಿ ನೀಡುವಂತೆ ಈ ಸಂದರ್ಭದಲ್ಲಿ ಸಚಿವರಿಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಲಾಗುವುದು ಎಂದರು.
ವೇದಿಕೆಯ ಮೇಲೆ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಅದ್ಯಕ್ಷ ಪ್ರವೀಣ್ ಹರವಾಳ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ.ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ ಸೇರಿದಂತೆ ಹಲವರಿದ್ದರು.
BREAKING: ರಾಜ್ಯದಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಮೀಸಲಾತಿ: ಸಿಎಂ ಸಿದ್ಧರಾಮಯ್ಯ ಮಹತ್ವದ ಸುಳಿವು
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
 
		



 




