ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಒಂದೆಡೆ ಮುಡಾ ಹಗರಣ ಸದ್ದು ಮಾಡುತ್ತಿದ್ದಾರೆ ಇನ್ನೊಂದೆಡೆ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.ಇದೀಗ ಮಾಜಿ ಸಂಸದ ಡಿಕೆ ಸುರೇಶ್ ಅವರು ಸದ್ಯ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಕೇಳುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ನವರು ಅವರ ಪಕ್ಷ ಉಳಿಸಿಕೊಳ್ಳಲು ಹೇಳ್ತಾರೆ. ಬಲಿಷ್ಠ ಸರ್ಕಾರವಿದೆ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥ ನಾಯಕತ್ವವಿದೆ. ಯಾರು ಏನೇ ಪ್ರಯತ್ನ ಪಟ್ಟರೂ ಖಂಡಿತ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣ ಇರುತ್ತದೆ. ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರ್ತಾರೆ. ಈ ಬಗ್ಗೆ ಡಿಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್‌ರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕುತಂತ್ರ ನಡೆಸಿದೆ ರಾಜ್ಯಪಾಲರ ಮುಂದೆ ಹಳೇ ಪ್ರಕರಣಗಳು ಬಾಕಿ ಇದ್ದರೂ ಸದ್ದು ಮಾಡ್ತಿಲ್ಲ. ಕಾಂಗ್ರೆಸ್ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸುಭದ್ರ ಸರ್ಕಾರವನ್ನು ಸಹಿಸಿಕೊಳ್ಳದೆ ಈ ರೀತಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆ ವಿಚಾರ ಪ್ರಸ್ತಾಪಿಸಿದ ಅವರು, ಅಭ್ಯರ್ಥಿ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನ ನಮ್ಮ ನಾಯಕತ್ವ ಕಣಕ್ಕಿಳಿಸಲಿದೆ. ಸಿಪಿವೈ ನಮ್ಮ ಪಕ್ಷದವರಲ್ಲ, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ನೋಡಿದೆ. ಈಗ ಎಲ್ಲಿದ್ದಾರೆ ಅಲ್ಲಿಯೇ ಯಶಸ್ಸು ಸಿಗಲಿ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಅಂತಾರೆ, ಇನ್ನೊಮ್ಮೆ ಜೆಡಿಎಸ್‌ಗೆ ಬಿಟ್ಟುಕೊಡ್ತೇನೆ ಅಂತಾರೆ. ಕಾಂಗ್ರೆಸ್ ಗೆ ಸಿಪಿವೈಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.