ವಾಷಿಂಗ್ಟನ್: ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಸಾ (NASA) ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಚಂದ್ರನ ಸುತ್ತ ಪಯಣಿಸುತ್ತಿರುವ ‘ಆರ್ಟೆಮಿಸ್-2’ (Artemis II) ಮಿಷನ್ನ ಗಗನಯಾತ್ರಿಗಳು ಭೂಮಿಯಿಂದ ಅತಿ ಹೆಚ್ಚು ದೂರ ಪ್ರಯಾಣಿಸಿದ ಮಾನವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ 1970ರಲ್ಲಿ ಅಪೊಲೊ-13 ಮಿಷನ್ ನಿರ್ಮಿಸಿದ್ದ 56 ವರ್ಷಗಳ ಹಳೆಯ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕಿದ್ದಾರೆ.
ಆರ್ಟೆಮಿಸ್-2 ಮಿಷನ್ನ ‘ಓರಿಯನ್’ (Orion) ನೌಕೆಯು ಭೂಮಿಯಿಂದ ಅಂದಾಜು 4,00,000 ಕಿಲೋಮೀಟರ್ಗಿಂತಲೂ (2,50,000 ಮೈಲಿ) ಅಧಿಕ ದೂರವನ್ನು ಕ್ರಮಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಇದು ಈ ಹಿಂದೆ ಅಪೊಲೊ-13 ತಲುಪಿದ್ದ ಗರಿಷ್ಠ ದೂರಕ್ಕಿಂತ ಹೆಚ್ಚಾಗಿದೆ.
ನಾಸಾದ ರೀಡ್ ವೈಸ್ಮನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಈ ಐತಿಹಾಸಿಕ ಸಾಧನೆ ಮಾಡಿದ ಗಗನಯಾತ್ರಿಗಳಾಗಿದ್ದಾರೆ.ಚಂದ್ರನ ಹಿಂಭಾಗದ (Far side) ಮೂಲಕ ಹಾದುಹೋಗುವಾಗ ಈ ದಾಖಲೆ ನಿರ್ಮಾಣವಾಗಿದೆ. ಈ ಹಂತದಲ್ಲಿ ಭೂಮಿಯೊಂದಿಗಿನ ರೇಡಿಯೋ ಸಂಪರ್ಕವು ಕೆಲಕಾಲ ಸ್ಥಗಿತಗೊಂಡಿತ್ತು (Blackout), ನಂತರ ಯಶಸ್ವಿಯಾಗಿ ಪುನರ್ಸ್ಥಾಪನೆಯಾಯಿತು.
ದಾಖಲೆಯ ದೂರವನ್ನು ತಲುಪಿದ ನಂತರ, ಓರಿಯನ್ ನೌಕೆಯು ಈಗ ಚಂದ್ರನ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಭೂಮಿಯತ್ತ ತನ್ನ ಪಯಣವನ್ನು ಆರಂಭಿಸಿದೆ.








