ಬೆಂಗಳೂರು: ಮೈಸೂರಿನಲ್ಲಿ ನಡೆದಿರುವ ‘ಮುಡಾ’ ಹಗರಣದ ವಿರುದ್ಧ ಪ್ರತಿಭಟನೆ ನಡೆಸಲು ಹೋದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮತ್ತು ಅವರನ್ನು ಬಂಧಿಸಿದ ಕಾಂಗ್ರೆಸ್ ಸರಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಪಕ್ಷದ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು, ಸಿದ್ದರಾಮಯ್ಯ ಸರಕಾರದ ದಬ್ಬಾಳಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿ ಸಂವಿಧಾನದ ನಿರ್ದೇಶನದಂತೆ ಪ್ರಜಾಪ್ರಭುತ್ವದ ಆಡಳಿತವಿದೆಯೇ ಅಥವಾ ಸರ್ವಾಧಿಕಾರಿ ಆಡಳಿತವಿದೆಯೇ ಎಂದು ಅವರು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವನ್ನು ಶ್ಯಾಡೋ ಗವರ್ನಮೆಂಟ್ ಅಂತ ಕರೆಯುತ್ತಾರೆ. ಸರಕಾರದ ಜನವಿರೋಧಿ ನೀತಿಗಳು ಮತ್ತು ಸರಕಾರದಿಂದ ಆಗಿರುವಂತಹ ಭ್ರμÁ್ಟಚಾರ ಇದರ ವಿರುದ್ಧ ಪ್ರತಿಭಟನೆ, ಹೋರಾಟ ಮಾಡುವುದು ಪ್ರತಿಪಕ್ಷದ ಹಕ್ಕು ಎಂದ ಅವರು, ನಾಚಿಕೆಯಿಲ್ಲದ ಕಾಂಗ್ರೆಸಿಗರು ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಕೊಟ್ಟಿರುವಂತಹ ಹಕ್ಕುಗಳನ್ನು ಒಳಗೊಂಡ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಓಡಾಡುತ್ತಾರೆ. ಆದರೆ ಸರ್ಕಾರ ಮಾಡಿರುವಂತಹ ಹಗರಣವನ್ನು ಪ್ರತಿಭಟಿಸುವ ಸಂದರ್ಭದಲ್ಲಿ ನಮ್ಮ ರಾಜ್ಯಾಧ್ಯಕ್ಷರನ್ನು ದಸ್ತಗಿರಿ ಮಾಡಿದ್ದಾರೆ ಎಂದು ಟೀಕಿಸಿದರು.
ಈ ಕಾಂಗ್ರೆಸ್‍ನ ಸರಕಾರದಲ್ಲಿ ಭ್ರμÁ್ಟಚಾರ ಮಾಡಿದವರು ರಾಜಾರೋಷವಾಗಿ ಓಡಾಡುತ್ತಾರೆ. ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದವರು, ಬಾಂಬ್ ಸ್ಫೋಟ ಮಾಡುವವರು, ಅತ್ಯಾಚಾರ ಮಾಡುವಂಥವರು ಡಿ.ಕೆ ಶಿವಕುಮಾರ್ ಅವರ ಬ್ರದರ್ಸ್ ಆಗಿಬಿಡುತ್ತಾರೆ. ಆದರೆ ಒಂದು ರಾಜಕೀಯ ಕ್ರಿಯಾಶೀಲ ಪ್ರತಿಪಕ್ಷವಾಗಿ ಈ ಸರಕಾರದ ಹಗರಣವನ್ನು ವಿಫಲತೆಯನ್ನು ಎತ್ತಿ ತೋರಿಸಲು ಹೋದಾಗ ನಿರಂತರವಾಗಿ ಅರೆಸ್ಟ್ ಮಾಡುವುದ್ನು ಈ ರಾಜ್ಯದ ಜನ ಗಮನಿಸಿದ್ದಾರೆ ಎಂದು ಪಿ.ರಾಜೀವ್ ಅವರು ನುಡಿದರು.
ನಾವು ನಿಮ್ಮನ್ನು ಬಂಧಿಸಲಿಲ್ಲ…
2021ರ ಸೆ.24 ತಾರೀಕು ನೀವು (ಸಿದ್ದರಾಮಯ್ಯನವರು) ಮತ್ತು ಡಿಕೆಶಿ ಹೆದ್ದಾರಿಯಲ್ಲಿ ಎತ್ತಿನ ಬಂಡಿಯ ಮೂಲಕ ಪ್ರತಿಭಟನೆ ಮಾಡಿಕೊಂಡು ಹೋಗಿದ್ದೀರಿ. ಅವತ್ತು ನಮ್ಮ ಸರಕಾರ ನಿಮ್ಮನ್ನು ಅರೆಸ್ಟ್ ಮಾಡಲಿಲ್ಲ. ಬದಲಾಗಿ ಒಬ್ಬ ಪ್ರತಿಪಕ್ಷ ನಾಯಕನಿಗೆ ಏನು ರಕ್ಷಣೆ ಕೊಡಬೇಕೋ ಅದನ್ನು ಪೊಲೀಸ್ ಇಲಾಖೆಯ ಮೂಲಕ ನಾವು ಕೊಟ್ಟಿದ್ದೇವೆ. 2021ರ ಮಾರ್ಚ್ 2 ರಂದು- ಸಿದ್ದರಾಮಯ್ಯನವರು ರಸ್ತೆಯಲ್ಲಿ ದೊಡ್ಡ ಧರಣಿ ಮಾಡಿದ್ದರು. ಅದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಬೇಕು. ಸಾರ್ವಜನಿಕ ಸಂಚಾರಕ್ಕೆ ತೊದರೆಯಾಗುತ್ತದೆ ಎನ್ನುವುದನ್ನು ಗಮನಿಸದೆ ನೀವು ಧರಣಿ ಮಾಡಿದ್ದೀರಿ. ಆಗ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ನಿಮ್ಮ ಧರಣಿಗೆ ಬಿಜೆಪಿ ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಅವತ್ತು ನಿಮ್ಮನ್ನು ಅರೆಸ್ಟ್ ಮಾಡಿಲ್ಲ ಎಂದು ವಿವರಿಸಿದರು.
2021ರ ಡಿಸೆಂಬರ್ 17 ರಂದು ಪ್ರತಿಭಟನೆಯ ಹೆಸರಿನಲ್ಲಿ ಸಾವಿರಾರು ಜನರನ್ನು ಟ್ರಾಕ್ಟರ್‍ನಲ್ಲಿ ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೀರಿ. ಅವತ್ತು ನಿಮ್ಮನ್ನು ಅರೆಸ್ಟ್ ಮಾಡಿರಲಿಲ್ಲ. ಪ್ರತಿಪಕ್ಷದ ನಾಯಕನಾಗಿ ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಲು ಅಧಿಕಾರವಿದೆ ಎಂದು ಹೇಳಿ ಆ ಅಧಿಕಾರವನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಬಿಜೆಪಿ ಮಾಡಿತ್ತು ಎಂದು ಗಮನ ಸೆಳೆದರು.
ದಲಿತರ ತಟ್ಟೆಗೆ ಕೈಹಾಕಿದವರು…
ಸಿದ್ದರಾಮಯ್ಯನವರು ಕೈಹಾಕಿದ್ದು ದಲಿತರ ತಟ್ಟೆಗೆ. ವಾಲ್ಮೀಕಿ ನಿಗಮದಿಂದ ಬಡವರಿಗೆ ಸೇರಬೇಕಾದ ಹಣವನ್ನು ಲೂಟಿ ಮಾಡಿದ ಸಿದ್ದರಾಮಯ್ಯ, ಎಸ್‍ಸಿ ಸಮಾಜದವರಿಗೆ ಸೇರಬೇಕಾದಂತಹ ಹಣವನ್ನು ಲೂಟಿ ಮಾಡಿದ್ದನ್ನು ವಿರೋಧಿಸಿ ನಾವು ಹೋರಾಟವನ್ನು ಮಾಡಿದಾಗ ಅರೆಸ್ಟ್ ಮಾಡಿದ್ದಾರೆ ಎಂದು ರಾಜೀವ್ ಅವರು ಟೀಕಿಸಿದರು.
ಇದೇ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಎತ್ತಿನ ಬಂಡಿಯ ಮೂಲಕ ಹೋರಾಟ ಮಾಡಿದ್ದ ಸಿದ್ದರಾಮಯ್ಯ, ಮೊನ್ನೆ ಯಾವ ಮುಖ ಇಟ್ಟುಕೊಂಡು ಸೆಸ್ ಹಾಕುವ ಮೂಲಕ ಪೆಟ್ರೋಲ್ ನ ಬೆಲೆ ಏರಿಸಿದಿರಿ…? ಇದರ ವಿರುದ್ಧ ಹೋರಾಟ ಮಾಡಿದಾಗ ಫ್ರೀಡಂ ಪಾರ್ಕ್‍ನಲ್ಲಿ ಅರೆಸ್ಟ್ ಮಾಡಿಸುವ ಕೆಲಸ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಕುಮಾರಕೃಪಾದಿಂದ ಮುಖ್ಯಮಂತ್ರಿಗಳ ಮನೆಗೆ ಮನವಿ ಕೊಡಲು ಹೋದರೆ ಅರೆಸ್ಟ್ ಮಾಡಿ ಕಳಿಸಿದಿರಿ. ಇವತ್ತು ಮುಡಾ ಹಗರಣ ನಡೆದಿದೆ. ಸಮಾಜವಾದದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಈ ರಾಜ್ಯದ ತೆರಿಗೆಯ ಹಣವನ್ನು ನೋಡಿಕೊಳ್ಳುವ ಗಾರ್ಡಿಯನ್ ಆಗಿ ತೆರಿಗೆ ಹಣವನ್ನು ದೋಚುತ್ತಾರೆ ಎಂದು ದೂರಿದರು.
ಜನಸಾಮಾನ್ಯರ ತೆರಿಗೆ ಹಣದ ರಕ್ಷಕನಾಗಿ ಮುಡಾ ಹಗರಣದಲ್ಲಿ 4 ಸಾವಿರ ಕೋಟಿಗಿಂತ ಹೆಚ್ಚಿನ ಅವ್ಯವಹಾರ ನಡೆದೆ. ಇದರ ವಿರುದ್ಧ ಮಾನ್ಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ ಅವರು ಅನುಮತಿ ಪಡೆದುಕೊಂಡೇ ಪ್ರತಿಭಟನೆಗೆ ಮುಂದಾದರು. ಕಾನೂನುಬದ್ಧವಾದ ಪ್ರತಿಭಟನೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಕೊಟ್ಟಿರುವ ಅಧಿಕಾರದ ಮೂಲಕ ಅಲ್ಲಿಯ ಜಿಲ್ಲಾಡಳಿತದ ಅನುಮತಿ ಪಡೆದುಕೊಂಡೇ ಹೋರಾಟ ಮಾಡಲು ಹೋಗುತ್ತಿದ್ದಾಗ, ನೀವು ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಅವರನ್ನು, ಬಂಧಿಸಿದಿರಿ. ಆ ಮೂಲಕ ಭ್ರಷ್ಟಾಚಾರವನ್ನು ಸಂರಕ್ಷಣೆ ಮಾಡುವುದಕ್ಕಾಗಿ ರಾಜ್ಯದ ಪೊಲೀಸರನ್ನು ಬಳಸಿಕೊಳ್ತಾ ಇದ್ದೀರಿ. ಇದು ಯಾವ ನ್ಯಾಯ? ಎಂದೂ ಅವರು ಪ್ರಶ್ನೆಯನ್ನು ಮುಂದಿಟ್ಟರು,
ನಮ್ಮ ರಾಜ್ಯಾಧ್ಯಕ್ಷರನ್ನು ಬಂಧಿಸಿರುವುದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು. ಇಂದಿರಾಗಾಂಧಿಯವರು ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ತುರ್ತು ಪರಿಸ್ಥಿತಿ ತಂದಿದ್ದರು. ಆದರೆ ಈಗ ಸಿದ್ದರಾಮಯ್ಯನವರು ಅಘೋಷಿತವಾದ ತುರ್ತು ಪರಿಸ್ಥಿತಿಯನ್ನು ಈ ರಾಜ್ಯದಲ್ಲಿ ತಂದು ಭ್ರಷ್ಟಾಚಾರಿಗಳು ಎದೆಯುಬ್ಬಿಸಿಕೊಂಡು ಓಡಾಡುವ ಹಾಗೆ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.