ಲೀಥಿಯಂ ಸೇರಿದಂತೆ ಕೈಗಾರಿಕಾ ಮಹತ್ವದ ಹಲವು ಅಪರೂಪದ ಲೋಹಗಳ ಅಗತ್ಯಕ್ಕೆ ಬಹುತೇಕ ಚೀನಾವನ್ನೇ ಅವಲಂಬಿಸಿರುವ ಭಾರತ ಸರ್ಕಾರ, ಇದೀಗ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಸಂಬಂಧ ಅರ್ಜೆಂಟೀನಾದ ದೇಶದ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. 200 ಕೋಟಿ ರೂಪಾಯಿ ಮೊತ್ತದ ಈ ಒಪ್ಪಂದಕ್ಕೆ ಭಾರತದ ಸರ್ಕಾರಿ ಸ್ವಾಮ್ಯದ ಖನಿಜ್ ಬಿದೇಶ್ ಇಂಡಿಯಾ ಲಿ (ಕಾಬಿಲ್) ಮತ್ತು ಅರ್ಜೇಂಟೀನಾ ಕೇಮನ್ ಸಂಸ್ಥೆಗಳು ಇತ್ತೀಚಿಗೆ ಸಹಿಹಾಕಿವೆ.
ಈ ಒಪ್ಪಂದದ ಅನ್ವಯ ಅರ್ಜೆಂಟೀನಾದ 5 ಪ್ರದೇಶಗಳಲ್ಲಿ ಲೀಥಿಯಂ ಖನಿಜ ಪತ್ತೆ ಮತ್ತು ಗಣಿಗಾರಿಕೆ ನಡೆಸುವ ಅವಕಾಶವನ್ನು ‘ಕಾಬಿಲ್’ ಪಡೆದುಕೊಳ್ಳಲಿದೆ. ಒಂದು ವೇಳೆ ಖನಿಜ ಪತ್ತೆಯಾದರೆ ಅದರ ಬಳಕೆ ಮೇಲೂ ಭಾರತ ಹಕ್ಕು ಹೊಂದಿರಲಿದೆ. ಇದು ಭಾರತದ ಸರ್ಕಾರಿ ಸಂಸ್ಥೆಯೊಂದರ ಮೊತ್ತಮೊದಲ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಒಪ್ಪಂದವಾಗಿದೆ. ಹೀಗಾಗಿ ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು, ಡಿಜಿಟಲ್ ಕ್ಯಾಮೆರಾ, ಲ್ಯಾಪ್‌ಟಾಪ್, ಮೊಬೈಲ್ ಬ್ಯಾಟರಿ ಮೊದಲಾದ ಉಪಕರಣಗಳಿಗೆ ಲೀಥಿಯಂ ಅತ್ಯಂತ ಅಗತ್ಯ. ಆದರೆ ಇಡೀ ಜಗತ್ತಿನ ಲೀಥಿಯಂ ಬೇಡಿಕೆಯ ಪೈಕಿ ಶೇ.80ರಷ್ಟು ಚೀನಾ ದೇಶವೊಂದೇ ಪೂರೈಸುತ್ತದೆ. ಭಾರತ ಕೂಡಾ ತನ್ನ ಅಗತ್ಯದ ಶೇ.54ರಷ್ಟಕ್ಕೆ ಚೀನಾವನ್ನೇ ಅವಲಂಬಿಸಿದೆ. ಅಲ್ಲಿಂದ ಪೂರೈಕೆಯಲ್ಲಿ ಆಗುವ ಯಾವುದೇ ವ್ಯತ್ಯಯ ಭಾರತ ಮತ್ತು ಜಾಗತಿಕ ಉದ್ಯಮ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿಯೇ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ದಾರಿ ಹುಡುಕುತ್ತಿವೆ. ಅರ್ಜೆಂಟೀನಾ, ಚಿಲಿ ಮತ್ತು ಬೊಲಿವಿಯಾ ದೇಶಗಳನ್ನು ಲೀಥಿಯಂ ಟ್ರಯಾಂಗಲ್ ಎಂದು ಕರೆಯಲಾಗುತ್ತದೆ. ಈ ದೇಶಗಳು ಲೀಥಿಯಂ ಸಂಪನ್ಮೂಲದಲ್ಲಿ ವಿಶ್ವದಲ್ಲಿ 2ನೇ ಸ್ಥಾನ, ಲೀಥಿಯಂ ಸಂಗ್ರಹದಲ್ಲಿ ವಿಶ್ವದಲ್ಲಿ 3ನೇ ಸ್ಥಾನ ಮತ್ತು ಲೀಥಿಯಂ ಉತ್ಪಾದನೆಯಲ್ಲಿ ವಿಶ್ವದಲ್ಲಿ 4ನೇ ಸ್ಥಾನದಲ್ಲಿವೆ. ಹೀಗಾಗಿ ಅರ್ಜೆಂಟೀನಾ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದು ಭಾರತ ಮತ್ತು ಅರ್ಜೆಂಟೀನಾ ಪಾಲಿಗೆ ಐತಿಹಾಸಿಕ ದಿನ. ನಾವು ದ್ವಿಪಕ್ಷೀಯ ಒಪ್ಪಂದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ. ಲೀಥಿಯಂ ಗಣಿಕಾರಿಕೆ ಕುರಿತು ಕಾಬಿಲ್ ಮತ್ತು ಕೇಮನ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಇಂಧನ ಪರಿವರ್ತನೆಯ ಮೂಲಕ ಸುಸ್ಥಿರ ಭವಿಷ್ಯದ ಭಾರತ ಕನಸಿಗೆ ಮತ್ತಷ್ಟು ನೆರವು ನೀಡಲಿದೆ. ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆಯಾಗಿದೆ.