ಬೆಂಗಳೂರು : ತಂತ್ರಜ್ಞಾನ ಮತ್ತು ಇತರೆ ಹಲವು ವಿಷಯಗಳಲ್ಲಿ ಭಾರತ ಅದೆಷ್ಟೋ ಮುಂದುವರೆಯುತ್ತಿದೆ. ಆದರೆ ದೇಶದಲ್ಲಿ ಇನ್ನೂ ಕೂಡ ಹಲವಾರು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅದೆಷ್ಟೋ ಹೋಟೆಲ್ಗಳಲ್ಲಿ, ಸಭೆ ಸಮಾರಂಭಗಳಲ್ಲಿ ಆಹಾರವನ್ನು ವೇಸ್ಟ್ ಮಾಡುತ್ತೇವೆ. ಈ ಕಾರಣದಿಂದ ಇದೀಗ ಆಹಾರ ವ್ಯರ್ಥವಾಗದಂತೆ ಹೊಸ ಕಾನೂನು ರಚನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಹೋಟೆಲ್‌ಗಳು ಮತ್ತು ಮದುವೆ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರವು ಕರಡು ನಿಯಮ ರೂಪಿಸಲಿದೆ. ದೇಶದಲ್ಲಿ ವಾರ್ಷಿಕವಾಗಿ 90,000 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತದೆ.
ಭಾರತದಲ್ಲಿ ಸುಮಾರು ಶೇ 70 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ರಾಗಿಯ ಬಳಕೆಯನ್ನು ಹೆಚ್ಚಿಸಬೇಕು, ಇದು ಆರೋಗ್ಯ ಸುಧಾರಿಸಲು ಉತ್ತಮವಾಗಿದೆ. ಆಹಾರವನ್ನು ವ್ಯರ್ಥ ಮಾಡದಂತೆ ಮಕ್ಕಳಿಗೆ ಕಲಿಸುವುದು ಮತ್ತು ಆಹಾರವನ್ನು ಸರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.