ಉತ್ತರ ಕನ್ನಡ: ರಾಜ್ಯದಲ್ಲಿ ಹೊರ ರಾಜ್ಯಗಳಿಗೆ ತೆರಳಿದಾಗ ಬಹಳನೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಾರಣ ಸ್ಥಳ, ಭಾಷೆ ಬೇರೆ ಬೇರೆಯಾಗಿದ್ದರೇ, ಮತ್ತೊಂದೆಡೆ ಆ ಪ್ರದೇಶಗಳಲ್ಲಿ ಯಾವೆಲ್ಲ ಕೃತ್ಯಗಳು ನಡೆಯುತ್ತದೆ ಎಂದು ಪ್ರವಾಸಿಗರಾದಂತ ನಿಮಗೆ ತಿಳಿದಿರೋದಿಲ್ಲ. ಹೀಗಾಗಿ ನೀವು ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗ್ತಾ ಇದ್ದೀರಿ ಅಂದರೆ ಅದಕ್ಕಿಂತ ಮೊದಲು ಮುಂದೆ ಸುದ್ದಿ ಓದಿ.
ತೀರ್ಥಯಾತ್ರೆಗೆ ತೆರಳಿ, ದೇವರ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಕುಮಟಾ ಕತಗಾಲ ಮಾಸ್ತಿಹಳ್ಳ ಮೂಲದ ಕುಟುಂಬವೊಂದು ಭಯಾನಕ ಅನುಭವದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ದರೋಡೆಕೋರರು ಲೂಟಿಗೆ ಯತ್ನಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಟುಂಬವೊಂದು, ಸ್ಥಳೀಯ ಗಜಾನನ ಟ್ರಾವೆಲ್ಸ್‌ನ ಟಿಟಿ ವಾಹನದಲ್ಲಿ ಶಿರಡಿ ಹಾಗೂ ಅಯೋಧ್ಯೆ ಪ್ರವಾಸಕ್ಕೆ ತೆರಳಿತ್ತು. ಪ್ರವಾಸ ಮುಗಿಸಿ ಊರಿಗೆ ಮರಳುತ್ತಿದ್ದಾಗ, ಶುಕ್ರವಾರ ರಾತ್ರಿ ಸೊಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಘಟನೆ ನಡೆದಿದೆ. ಆ ಬೆಚ್ಚಿ ಬೀಳಿಸೋ ವೀಡಿಯೋ ಈ ಕೆಳಗಿದೆ ನೀವು ಒಮ್ಮೆ ನೋಡಿ ಬಿಡಿ..
ಕುಟುಂಬವಿದ್ದ ಟಿಟಿ ವಾಹನವನ್ನು ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಚಲಿಸುತ್ತಿದ್ದ ವಾಹನದ ಹಿಂದಿನ ಬಾಗಿಲಿಗೆ ಜಿಗಿದು ಒಳನುಗ್ಗಿದ್ದಾರೆ. ಬಳಿಕ ಹಿಂಬದಿಯಲ್ಲಿದ್ದ ಬ್ಯಾಗ್‌ಗಳನ್ನು ಎಳೆದು ಹೊರಗೆಸೆದಿದ್ದಾರೆ. ನಡೆದ ಈ ಘಟನೆಯಿಂದ ವಾಹನದಲ್ಲಿದ್ದವರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ದರೋಡೆಕೋರರ ಕೃತ್ಯವನ್ನು ಗಮನಿಸಿದ ಚಾಲಕ ಗಣಪತಿ ನಾಯ್ಕ್, ತಕ್ಷಣವೇ ವಾಹನ ನಿಲ್ಲಿಸಿದ್ದಾರೆ. ಆದರೆ, ಕಳ್ಳರು ಇಡೀ ವಾಹನವನ್ನೇ ಸುತ್ತುವರಿದು ದಾಳಿ ಮಾಡಲು ಮುಂದಾಗಿದ್ದಾರೆ. ಈ ವೇಳೆ, ಧೈರ್ಯಗೆಡದ ಚಾಲಕ ವಾಹನದಲ್ಲಿ ಅಡುಗೆಗೆ ಇಟ್ಟಿದ್ದ ಆಯುಧವನ್ನು ಕೈಯಲ್ಲಿ ಹಿಡಿದು ಅವರನ್ನು ಎದುರಿಸಲು ಮುಂದಾಗಿದ್ದಾರೆ. ಚಾಲಕನ ಧೈರ್ಯವನ್ನು ಕಂಡು ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಅದೃಷ್ಟವಶಾತ್, ಕಳ್ಳರು ದೋಚಿದ ಬ್ಯಾಗ್‌ಗಳಲ್ಲಿ ಬಟ್ಟೆಗಳಿದ್ದವೇ ಹೊರತು ಯಾವುದೇ ನಗದು ಅಥವಾ ಚಿನ್ನಾಭರಣ ಇರಲಿಲ್ಲ. ಪ್ರಾಣಾಪಾಯದಿಂದ ಪಾರಾದ ಸಮಾಧಾನದಲ್ಲಿ ಕುಟುಂಬವು ದೂರು ನೀಡದೆ ಕುಮಟಾದತ್ತ ತಮ್ಮ ಪ್ರಯಾಣ ಮುಂದುವರಿಸಿದೆ.
ಪ್ರವಾಸಿಗರೇ ಎಚ್ಚರ…!
ಈ ಹೆದ್ದಾರಿಯಲ್ಲಿ ಇಂತಹ ಘಟನೆಗಳು ಹೊಸತೇನಲ್ಲ. ಈ ಹಿಂದೆ ಮೈಸೂರು ಮತ್ತು ಮಂಗಳೂರಿನಿಂದ ಬಂದ ಪ್ರವಾಸಿಗರಿಗೂ ಇದೇ ರೀತಿ ದರೋಡೆಯ ಅನುಭವವಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಸಂಚರಿಸುವ ಪ್ರವಾಸಿ ವಾಹನಗಳೇ ಇವರ ಗುರಿಯಾಗಿದ್ದು, ಅಪಘಾತವಾದಂತೆ ನಟಿಸಿ ವಾಹನ ನಿಲ್ಲಿಸಿ ಲೂಟಿ ಮಾಡುವುದು ಈ ಗ್ಯಾಂಗ್‌ನ ಕಾರ್ಯಶೈಲಿಯಾಗಿದೆ.
ಪ್ರಯಾಣಿಕರಿಗೆ ಎಚ್ಚರಿಕೆ
ಶಿರಡಿ, ಅಯೋಧ್ಯೆ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ಹೋಗುವವರು, ವಿಶೇಷವಾಗಿ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52 ರ ಸೊಲ್ಲಾಪುರ ಭಾಗದಲ್ಲಿ ರಾತ್ರಿ ವೇಳೆ ಪ್ರಯಾಣಿಸುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ:
* ಸಾಧ್ಯವಾದಷ್ಟು ರಾತ್ರಿ ಪ್ರಯಾಣವನ್ನು ತಪ್ಪಿಸಿ.
* ಅಪರಿಚಿತ ಸ್ಥಳಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸಬೇಡಿ.
* ಯಾರಾದರೂ ಅಪಘಾತದ ನೆಪದಲ್ಲಿ ವಾಹನ ಅಡ್ಡಗಟ್ಟಿದರೆ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
* ಪ್ರಯಾಣದುದ್ದಕ್ಕೂ ವಾಹನದ ಬಾಗಿಲುಗಳನ್ನು ಲಾಕ್ ಮಾಡಿಕೊಳ್ಳಿ.
* ಅನುಮಾನಾಸ್ಪದವಾಗಿ ಯಾರಾದರೂ ಹಿಂಬಾಲಿಸುತ್ತಿದ್ದರೆ, ವಾಹನದ ವೇಗ ಹೆಚ್ಚಿಸಿ ಜನನಿಬಿಡ ಪ್ರದೇಶದತ್ತ ಚಲಿಸಿ.
ಬೆಂಗಳೂರಿನ ಜೆ.ಪಿ.ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಪುತ್ಥಳಿ ಮರುಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion