ಬೆಂಗಳೂರು: ಗೋಬಿ ಮಂಚೂರಿ ಅಂದ್ರೆ ಸಾಕು ಅನೇಕರು ಬಾಯಲ್ಲಿ ನೀರು ಸುರಿಸುತ್ತಾರೆ. ಕೆಲವರಿಗಂತೂ ಅದಂದ್ರೆ ಪಂಚ ಪ್ರಾಣ. ವಾರದಲ್ಲಿ ಒಂದು ದಿನವೇನು ದಿನವೂ ತಿನ್ನೋರು ಇರ್ತಾರೆ. ನೀವು ನಾಲಿಗೆ ಚಪ್ಪರಿಸಿಕೊಂಡು ಗೋಬಿ ಮಂಚೂರಿ ತಿನ್ನುತ್ತಾ ಇದ್ದಾರೇ, ಅದಕ್ಕೂ ಮುಂಚೆ ಅದರ ಒಡಲಾಳದಲ್ಲಿ ಇರೋ ಮಾರಕ ರಾಸಾಯನಿಕದ ಬಗ್ಗೆ ತಿಳಿಯಲೇ ಬೇಕು. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿಯನ್ನು ಆದೇಶದ ಮೂಲಕ ಇಂದು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು Cotton Candy ಗಳ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗಿರುತ್ತದೆ ಎಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು Cotton Candy ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ. ವಿವರಗಳು ಈ ಕೆಳಕಂಡಂತಿರುತ್ತವೆ.
ಗೋಬಿ ಮಂಚೂರಿ ಮಾದರಿಗಳ ವಿವರ
- ಸಂಗ್ರಹಿಸಲಾದ ಮಾದರಿಗಳು -171
- ಕೃತಕ ಬಣ್ಣಗಳು ಕಂಡುಬಂದ ಅಸುರಕ್ಷಿತ ಮಾದರಿಗಳು – 107
- ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳು 64
ಕಂಡುಬಂದಿರುವ ಕೃತಕ ಬಣ್ಣಗಳು – ಟಾಟಾಸೈನ್, ಸನ್ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್
Cotton Candy ಮಾದರಿಗಳ ವಿವರ
- ಸಂಗ್ರಹಿಸಲಾದ ಮಾದರಿಗಳು -25
- ಕೃತಕ ಬಣ್ಣಗಳು ಕಂಡುಬಂದ ಅಸುರಕ್ಷಿತ ಮಾದರಿಗಳು -15
- ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳು -10
ಕಂಡುಬಂದಿರುವ ಕೃತಕ ಬಣ್ಣಗಳು – ಟಾರ್ಟ್ರಾಸೈನ್, ಸನ್ಸೆಟ್ ಯೆಲ್ಲೋ ಮತ್ತು ರೋಡಮೈನ್-ಬಿ
ಕೃತಕ ಬಣ್ಣಗಳು ಕಂಡುಬಂದ ಮಾದರಿಗಳು The Food Safety and Standards Act, 2006 ರ ನಿಯಮ 3(1)ರನ್ವಯ ಅಸುರಕ್ಷಿತವಾಗಿರುತ್ತವೆ.
The Food Safety and Standards (Food Products Standards and Food Additives) Regulations, 2011 ರ ನಿಯಮ 16.0 ರನ್ವಯ ಗೋಬಿ ಮಂಚೂರಿ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ತಿಳಿಸಿದೆ.
The Food Safety and Standards (Food Products Standards and Food Additives) Regulations, 2011 ರ ನಿಯಮಗಳನ್ವಯ Cotton Candy ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು /ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಮಾಹಿತಿ ನೀಡಿದೆ.
ಆದ್ದರಿಂದ ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶಿಸಿರುತ್ತಾರೆ.
ಇದೇ ರೀತಿ Cotton Candy ಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು ಬಳಸುವುದನ್ನು ಮತ್ತು ರೋಡಮೈನ್-ಬಿ ಸೇರಿದಂತೆ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶಿಸಿರುತ್ತಾರೆ.
ಸಂಬಂಧಿಸಿದಂತೆ ಯಾವುದೇ ರೀತಿಯ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.
ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಚಿಕ್ಕಮಕ್ಕಳೂ ಸೇರಿದಂತೆ ಬಳಕೆದಾರರಿಗೆ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಕೃತಕ ಬಣ್ಣಗಳನ್ನು ಬಳಸಿ ತಯಾರಿಸಲಾಗಿರುವ ತಿನಿಸುಗಳನ್ನು ಉಪಯೋಗಿಸದಂತೆ/ಮಿತವಾಗಿ ಬಳಸುವಂತೆ ಖಡಕ್ ಆದೇಶದಲ್ಲಿ ತಿಳಿಸಿದ್ದಾರೆ.
‘ಹಳೆಯ ತಂತ್ರ, ಎಂದಿಗೂ ರಹಸ್ಯವಲ್ಲ’: ಬಿಜೆಪಿ ಸಂಸದರ ‘ಸಂವಿಧಾನ ಬದಲಾವಣೆ’ ಹೇಳಿಕೆಗೆ ಚಿದಂಬರಂ ತಿರುಗೇಟು