ಬೆಂಗಳೂರು: 2024–25ರ ಸಾಲಿನಲ್ಲಿ ಸುಮಾರು 12,392 ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. 2025–26ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ಒಟ್ಟು 10,267 ಶಿಕ್ಷಕರ ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. 2016 ರಿಂದ 2020 ರ ವರೆಗಿನ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಶಾಲೆಗಳಲ್ಲಿ ಸುಮಾರು 6,000 ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂಬುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹೀಗಿದೆ ಇಂದಿನ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಅಂಗವಾಗಿ ಮಾಡಿದ ಭಾಷಣದ ಪ್ರಮುಖ ಹೈಲೈಟ್ಸ್..
ನಮ್ಮ ಇಲಾಖೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅದರಲ್ಲಿ ಗುಣಾತ್ಮಕ ಕಾರ್ಯಕ್ರಮಗಳು
ಶಿಕ್ಷಕರ ನೇಮಕಾತಿ
2024–25ರ ಸಾಲಿನಲ್ಲಿ ಸುಮಾರು 12,392 ಶಿಕ್ಷಕರಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. 2025–26ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ಒಟ್ಟು 10,267 ಶಿಕ್ಷಕರ ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. 2016 ರಿಂದ 2020 ರ ವರೆಗಿನ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಶಾಲೆಗಳಲ್ಲಿ ಸುಮಾರು 6,000 ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯ ಬೇಡಿಕೆ ಹೆಚ್ಚಿರುವುದರಿಂದ 5,000 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯಗಳು
ಕರ್ನಾಟಕ ಪಬ್ಲಿಕ್ ಶಾಲೆಗಳು. ಇದುವರೆಗೂ 307 ಮಾತ್ರ ಕೆಪಿಎಸ್ ಶಾಲೆಗಳಿದ್ದು, ಈಗ ಮಾನ್ಯ ಮುಖ್ಯಮಂತ್ರಿಗಳ ಸಹಕಾರದಿಂದ ನಮ್ಮ ಸರ್ಕಾರದ ವತಿಯಿಂದ ಒಂದೇ ಬಾರಿಗೆ 800 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿಯಾಗಿ 200 ಹಾಗೂ ಗಣಿಬಾಧಿತ ಪ್ರದೇಶಗಳಿಗೆ ಸುಮಾರು 100 ಕೆಪಿಎಸ್ ಶಾಲೆಗಳನ್ನು ನೀಡಲಾಗಿದೆ ಎಂದರು.
ಹೊಸ ಕೊಠಡಿಗಳು ಮತ್ತು ರಿಪೇರಿ
2024-25ನೇ ಸಾಲಿನಲ್ಲಿ ಶಾಲಾ ಕೊಠಡಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ₹ 850 ಕೋಟಿಗಳ ಕಾಮಗಾರಿ ಚಾಲನೆಯಲ್ಲಿದೆ. ಈ ಸಾಲಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹೊಸ ಕೊಠಡಿ ಮತ್ತು ರಿಪೇರಿಗಾಗಿ ₹ 725 ಕೋಟಿಗಳ ವೆಚ್ಚದಲ್ಲಿ ಅಂದಾಜು 2,500 ಹೊಸ ಕೊಠಡಿಗಳು ಮತ್ತು ರಿಪೇರಿ ಕಾಮಗಾರಿಗಳು ಶೀಘ್ರದಲ್ಲಿ ಶುರುವಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಲು 50 ಕೋಟಿ ರೂಪಾಯಿ ಅನುದಾನವನ್ನು ಪೀಠೋಪಕರಣ ಖರೀದಿಗೆ ನೀಡಲಾಗಿದೆ. ರಾಜ್ಯದಲ್ಲಿ 16,347 ಶಾಲೆಗಳಿಗೆ ಅಡುಗೆ ಮನೆ, ಆಧುನೀಕರಣ, ಕಾರ್ಯ ಮತ್ತು ಹೊಸ ಪಾತ್ರೆಗಳನ್ನು ಒದಗಿಸಲು ಸುಮಾರು 46 ಕೋಟಿಗಳ ವೆಚ್ಚವನ್ನು ಮಾಡಲಾಗುವುದು ಎಂದರು.
ಇತರ ಕಾರ್ಯಕ್ರಮಗಳು
ಅತಿಥಿ ಶಿಕ್ಷಕರ ನೇಮಕಾತಿ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಥಮ ಬಾರಿಗೆ, 51,000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಲಾಗಿದೆ. ಅತಿಥಿ ಶಿಕ್ಷಕರಿಗೆ ₹ 2,000 ಗೌರವ ಧನವನ್ನು ಹೆಚ್ಚಿಸಲಾಗಿದೆ. ಪರೀಕ್ಷಾ ಫಲಿತಾಂಶ. ಮೂರು ಪರೀಕ್ಷಾ ಮಾದರಿಯನ್ನು ಪರಿಚಯಿಸಿದ್ದರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2024-25 ಸಾಲಿನಲ್ಲಿ 7,99,390 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಶೇಕಡವಾರು ಸುಮಾರು 79.71 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 2024–25 ಸಾಲಿನಲ್ಲಿ 6,39,800 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಶೇಕಡವಾರು 85.19 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ ಎಂದಿದ್ದಾರೆ.
ಹೊಸ ಕಾರ್ಯಕ್ರಮಗಳು
‘ಮೆಗಾ ಪೋಷಕರ ಸಭೆ’. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ, ಏಕಕಾಲಕ್ಕೆ ಕರ್ನಾಟಕ ಪೋಷಕರ, ಶಿಕ್ಷಕರ ‘ಮೆಗಾ ಪಿಟಿಎಂ’ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
2026-27 ಶೈಕ್ಷಣಿಕ ಸಾಲಿನಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ 7 ಸರ್ಕಾರಿ ಶಾಲೆಗಳ ಆವರಣದಲ್ಲಿ ಹೆಚ್ಚುವರಿ ಕನ್ನಡ ಮಾಧ್ಯಮ ವಿಭಾಗಗಳನ್ನು ಪ್ರಾರಂಭಿಸಲು ಹಾಗೂ 2 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಪೂರ್ಣ ಆದ್ಯತೆ ನೀಡಲಾಗುವುದು ಎಂದಿದ್ದಾರೆ.








