ಬೆಂಗಳೂರು: 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಆಗಿ ಘೋಷಿಸಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
2025-26ರ ಬಜೆಟ್ ಕುರಿತು ಸದನದಲ್ಲಿ ಮಾತನಾಡಿದ ಅವರು, ಹಣವನ್ನು ಯಾವ ಇಲಾಖೆಗೆ ನಿಗದಿಪಡಿಸುವುದು ಮುಖ್ಯವಲ್ಲ, ರಾಜ್ಯದ ಪ್ರತಿಯೊಬ್ಬ ಪ್ರಜೆಗೆ ಏನನ್ನು ಕೊಡುತ್ತೇವೆ ಎಂಬುದನ್ನು ಚರ್ಚಿಸಬೇಕಾಗುತ್ತದೆ. ಅದರ ಕುರಿತು ನಾವು ಆಲೋಚಿಸಬೇಕಾಗುತ್ತದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗಳಿಗೆ ಅತಿಹೆಚ್ಚಿನ ಮೊತ್ತವನ್ನು ನಿಯೋಜನೆ ಮಾಡಲಾಗಿದೆ. ಆದರೆ ಅಲ್ಲಿ ರೆವೆನ್ಯೂ ಹೆಲ್ತ್ ಎಕ್ಸ್ಪೆಂಡಿಚರ್; ಔಷಧಿ, ಚಿಕಿತ್ಸೆ ಮತ್ತು ನಿರ್ವಹಣೆಗೆ ಹಣವನ್ನು 6.3% ಕಡಿಮೆ ಮಾಡಿದ್ದೇವೆ. ಇದನ್ನು ಕಳೆದ ವರ್ಷದಷ್ಟಾದರೂ ಇಡಬೇಕು ಎಂದು ನಾನು ನಿಮ್ಮ ಮೂಲಕ ಆಗ್ರಹ ಮಾಡುತ್ತೇನೆ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಆಸ್ಪತ್ರೆ ಕಟ್ಟುವುದು ಹೆಚ್ಚುಗಾರಿಕೆಯಲ್ಲ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ವೈದ್ಯರು, ನರ್ಸ್, ಗ್ರೂಪ್ ಡಿ ಸೇರಿದಂತೆ ಸುಮಾರು 38 ಸಾವಿರ ವಿವಿಧ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. ಆಸ್ಪತ್ರೆ ಕಟ್ಟುವುದು ಎಷ್ಟು ಮುಖ್ಯವೋ ಅದಕ್ಕೆ ಸಿಬ್ಬಂದಿ ನೇಮಕವೂ ಅಷ್ಟೇ ಮುಖ್ಯ. ಅದಕ್ಕಾಗಿ ನನ್ನ ಪ್ರಕಾರ ಒಂದು ತುರ್ತು ಯೋಜನೆಯನ್ನು ನಾವು ಸಿದ್ಧಪಡಿಸಿ ಮುಂದಿನ 1 ವರ್ಷದಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.








