ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ತಮ್ಮ ಪ್ರಾಣದ ಹಂಗನ್ನು ತೊರೆದು, ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ‘ಹೊಯ್ಸಳ’ ಮತ್ತು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗಳನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಈ ಪ್ರಕರಣಗಳು ದಿ: 01-08-2021 ರಿಂದ 31-07-2022 ರೊಳಗೆ ನಡೆದಿರಬೇಕು. ದಿನಾಂಕ : 01-04-2004 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕದೆಯಾದ ಮಕ್ಕಳಿಗೆ ತಲಾ ರೂ.10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಧೈರ್ಯ ಶೌರ್ಯ ಸಾಧನೆಯು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಶೌರ್ಯ ಪ್ರದರ್ಶಿಸಿದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಗ್ರಾ.ಪಂ, ತಾ.ಪಂ, ಶಾಲಾ ಶಿಕ್ಷಕರು ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟಕ್ಕೆ ತಿಳಿಸಬಹುದು.
ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇವರಿಂದ ಪಡೆದು ಮಗುವಿನ 2 ಭಾವಚಿತ್ರ, ಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ(ಎಫ್ಐಆರ್) ಜನ್ಮ ದಿನಾಂಕ ದೃಢೀಕರಣ, ಧೈರ್ಯ ತೋರಿದ ಬಗ್ಗೆ ಪತ್ರಿಕಾ ಪ್ರಕಟಣೆಗಳನ್ನು ಲಗತ್ತಿಸಿ ಸೆಪ್ಟೆಂಬರ್ 30 ರೊಳಗೆ ಈ ಕಚೇರಿಗೆ ಸಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.