ಬೆಂಗಳೂರು : ಚಾರ್ ಧಾಮ್ ಯಾತ್ರೆಯನ್ನು ಕೈಗೊಂಡ ರಾಜ್ಯದ ಯಾತ್ರಾರ್ಥಿಗಳಿಗೆ ನೀಡಲಾಗುವ ಸರ್ಕಾರದ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಕೆಯ ದಿನಾಂಕವನ್ನ ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರ ಸೂಚನೆಯ ಮೇರೆಗೆ ಜನವರಿ 31, 2023 ರ ವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯದಿಂದ ಪ್ರಪ್ರಥಮ ಬಾರಿಗೆ ಚಾರ್ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 20 ಸಾವಿರದಂತೆ ಸರಕಾರದ ಸಹಾಯಧನವನ್ನ ನೀಡಲಾಗುತ್ತದೆ. ಇದಕ್ಕೆ ಡಿಸೆಂಬರ್ 1 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಈ ಬಾರಿ ಚಾರ್ಧಾಮ್ ಯಾತ್ರೆಯನ್ನು ಕೈಗೊಳ್ಳುವ ಸಂಧರ್ಭದಲ್ಲಿ ಜನಸಂಧಣಿ ಹೆಚ್ಚಾಗಿದ್ದರಿಂದ ಹಾಗೂ ತಾಂತ್ರಿಕ ಕಾರಣಗಳಿಂದ ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಬೆಳಗಾವಿಯ ಅಧಿವೇಶನದಲ್ಲಿ ಹಲವಾರು ಶಾಸಕರು ಮಾನ್ಯ ಸಚಿವರಿಗೆ ಮನವಿ ಮಾಡಿದ್ದರು. ಹೆಚ್ಚಿನ ಜನರು ಅರ್ಜಿ ಸಲ್ಲಿಸಲಿ ಎನ್ನುವ ಉದ್ದೇಶದಿಂದ, ಹಾಗೂ ಅಗತ್ಯ ದಾಖಲೆಗಳನ್ನ ಕ್ರೋಢೀಕರಿಸಲು ಅವಕಾಶ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಮಾನ್ಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರ ಸೂಚನೆಯಂತೆ. ಈಗ ಅರ್ಜಿ ಸಲ್ಲಿಕೆಗೆ ಇದ್ದಂತಹ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ಅರ್ಜಿ ಸಲ್ಲಿಕೆಯ ದಿನಾಂಕವನ್ನ ಒಂದು ತಿಂಗಳುಗಳ ಕಾಲ (ಜನವರಿ 31, 2023) ವಿಸ್ತರಿಸಲಾಗಿದೆ.
ಚಾರ್ಧಾಮ್ ಯಾತ್ರೆಗೆ ಸಹಾಯಧನ ನೀಡುವುದು ನಮ್ಮ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಹೆಚ್ಚಿನ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಜನವರಿ 31,2023 ರ ತನಕ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.