ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ವಾರ್ಡ್ ನಂ. 23ರ ಅರಳಿಕೊಪ್ಪ ಬಡಾವಣೆಯಲ್ಲಿ ಅನಧಿಕೃತವಾಗಿ ಮದರಸ ನಿರ್ಮಿಸಿ, ಸ್ಥಳೀಯವಾಗಿ ಶಾಂತಿ ಭಂಗ ಉಂಟುಮಾಡಲಾಗುತ್ತಿದೆ ಎಂದು ಆರೋಪಿಸಿ ಬಡಾವಣೆ ನಿವಾಸಿಗಳು ಸೋಮವಾರ ನಗರಸಭೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಅನಧಿಕೃತ ಮದರಸಕ್ಕೆ ಬಜರಂಗದಳ ಆಕ್ಷೇಪ
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, “ಅರಳಿಕೊಪ್ಪ ಬಡಾವಣೆಯಲ್ಲಿ ಕಳೆದ 15 ದಿನಗಳಿಂದ ಅನಧಿಕೃತವಾಗಿ ಮದರಸ ನಡೆಸಲಾಗುತ್ತಿದೆ. ಈ ಬಡಾವಣೆಯಲ್ಲಿ 150ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಹಾಗೂ 25ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳಿದ್ದು, ಮುಸ್ಲಿಂ ಸಮುದಾಯದ ಮನೆಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಹೀಗಿದ್ದರೂ ‘ಮದರಸ ಮುನಾವರ್’ ಎಂಬ ಬೋರ್ಡ್ ಹಾಕಿಕೊಂಡು ಪ್ರತಿದಿನ ಪ್ರಾರ್ಥನೆ ನಡೆಸುವ ಮೂಲಕ ಸ್ಥಳೀಯರ ನೆಮ್ಮದಿ ಕೆಡಿಸಲಾಗುತ್ತಿದೆ,” ಎಂದು ದೂರಿದರು. ನಗರಸಭೆಯು ತಕ್ಷಣ ಮಧ್ಯಪ್ರವೇಶಿಸಿ ಈ ಅನಧಿಕೃತ ಮದರಸವನ್ನು ಮುಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಗೋದಾಮಿನಲ್ಲಿ ಪ್ರಾರ್ಥನೆ: ಸ್ಥಳೀಯರ ಆತಂಕ
ಸ್ಥಳೀಯ ನಿವಾಸಿ ಸತೀಶ್ ಆರ್. ಮಾತನಾಡಿ, “ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆಗಾಗಿ ಗೋದಾಮೊಂದನ್ನು ಬಳಸಲಾಗಿತ್ತು. ಆದರೆ ಹಬ್ಬ ಮುಗಿದ ನಂತರವೂ ಅದನ್ನು ಮುಚ್ಚದೆ ಮದರಸವಾಗಿ ಪರಿವರ್ತಿಸಲಾಗಿದೆ. ಈಗ ಬೇರೆ ಬೇರೆ ಭಾಗಗಳಿಂದ ಹೆಣ್ಣುಮಕ್ಕಳು ಮತ್ತು ಅಪರಿಚಿತರು ಇಲ್ಲಿಗೆ ಬರುತ್ತಿದ್ದಾರೆ. ಇದರಿಂದ ಬಡಾವಣೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ನಗರಸಭೆ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆ
ಬಡಾವಣೆಯ ನಿವಾಸಿಗಳು ಮತ್ತು ಹಿಂದೂ ಪರ ಸಂಘಟನೆಗಳ ಮುಖಂಡರು ಒಗ್ಗೂಡಿ ಪೌರಾಯುಕ್ತರಿಗೆ ಈ ಕುರಿತು ವಿಸ್ತೃತ ಮನವಿ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅನಧಿಕೃತ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸಂದೀಪ್, ನಾರಾಯಣ ಸ್ವಾಮಿ, ರಾಘವೇಂದ್ರ, ಗೋಮ್ಸ್, ರವೀಂದ್ರ, ವೆಂಕಟೇಶ್, ಸಂತೋಷ್ ಸೇರಿದಂತೆ ಬಡಾವಣೆಯ ಹಲವಾರು ನಿವಾಸಿಗಳು ಉಪಸ್ಥಿತರಿದ್ದರು.
ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪದ ಇರಾನ್: ಹಾರ್ಮುಜ್ ಜಲಸಂಧಿ ತೆರೆಯಲು ನಕಾರ!
ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ಗ್ರಾಮಪಂಚಾಯಿತಿ’ಗಳಲ್ಲಿ ಸಿಗಲಿದೆ ಈ ಸೌಲಭ್ಯಗಳು.!








