ಧಾರವಾಡ : ಈಗಾಗಲೇ ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಇದೀಗ 25,000 ಕೋಟಿ ಬಾಕಿ ಬಿಲ್ ಉಳಿಸಿಕೊಂಡಿದ್ದಕ್ಕಾಗಿ ಇದೀಗ ಉತ್ತರ ಕರ್ನಾಟಕದ ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೌದು ಬಾಕಿ ಪಾವತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಉತ್ತರ ಕರ್ನಾಟಕ ಗುತ್ತಿಗೆದಾರರು ಬೀದಿಗಿಳಿದಿದ್ದು, ಇಂದು ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ‘25 ಸಾವಿರ ಕೋಟಿ ಬಾಕಿ ಬಿಲ್ ಕೊಡಬೇಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಜಿ.ಎಸ್.ಟಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.