ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು ಜಮೀನು ಮಾರಾಟ ಮಾಡಿದ ಹಣದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಓಮಿನಿ ವಾಹನ ತಡೆದು, ಹಲ್ಲೆ ನಡೆಸಿ ₹38 ಲಕ್ಷ ನಗದು, ಮೊಬೈಲ್ ದರೋಡೆ ಮಾಡಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಭಾಗದ ಅರಕೆರೆ ಎ.ಕೆ. ಕಾಲೋನಿ ಸಮೀಪ ಶುಕ್ರವಾರ ಮುಂಜಾನೆ 4 ಗಂಟೆ ಹೊತ್ತಿಗೆ ನಡೆದಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ನಿರ್ಮಲ ದೂರು ದಾಖಲಿಸಿಕೊಂಡಿದ್ದಾರೆ.
ಭದ್ರಾವತಿ ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ಕಿರಾಣಿ ವರ್ತಕ ಮಾಲತೇಶ್ ಹಣ ಕಳೆದುಕೊಂಡ ದುರ್ದೈವಿ. ಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿದ್ದ ತನ್ನ 10 ಎಕರೆ 58 ಸೆಂಟ್ಸ್ ಜಮೀನನ್ನು ಮಾಲತೇಶ್ ಹೊಸಪೇಟೆಯ ಡಾಕ್ಟರ್ ಒಬ್ಬರಿಗೆ ಮಾರಾಟ ಮಾಡಿದ್ದರು. ಜಮೀನು ಮಾರಾಟದ 1.21 ಕೋಟಿ ಹಣವನ್ನು ಮರಿಯಮ್ಮನಹಳ್ಳಿಯಲ್ಲಿ ಪಡೆದುಕೊಂಡಿದ್ದ ಮಾಲತೇಶ್ ಅವರು, ಹೊಸಪೇಟೆಯ ಬಾಬುಲಾಲ್ ಹತ್ತಿರ ತಾವು ಮಾಡಿದ್ದ 36 ಲಕ್ಷ ಸಾಲಕ್ಕೆ ಹಣ ಪಾವತಿ ಮಾಡಿದ್ದಾರೆ.
ಬಳಿಕ ರಿಜೆಸ್ಟ್ರೇಷನ್ ಇತರೆ ಖರ್ಚುಗಳನ್ನು ಕಳೆದು ಉಳಿದಿದ್ದ 76 ಲಕ್ಷಗಳನ್ನು ಮಾಲತೇಶ್ ಪ್ರತ್ಯೇಕ ಚೀಲಗಳಲ್ಲಿ ಗಂಟುಕಟ್ಟಿಕೊಂಡಿದ್ದರು. ಒಂದು ಚೀಲದಲ್ಲಿ 38 ಲಕ್ಷ ಹಾಗೂ ಮತ್ತೊಂದು ಚೀಲದಲ್ಲಿ 36 ಲಕ್ಷ ಹಾಗೂ ತನ್ನ ಜೇಬಿನಲ್ಲಿ 2 ಲಕ್ಷ ಇಟ್ಟುಕೊಂಡಿದ್ದರು. ಬಳಿಕ ಮೈದೊಳಲು ಮಲ್ಲಾಪುರದ ಸ್ನೇಹಿತ ಮಾನಾಚಾರಿ ಜತೆ ಓಮಿನಿಯಲ್ಲಿ ಹರಪನಹಳ್ಳಿ, ಹರಿಹರ ಮಾರ್ಗವಾಗಿ ಬರುತ್ತಿದ್ದರು.
ಈ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ವರ್ತಕ ಮಾಲತೇಶ್ ಇದ್ದ ಓಮಿನಿ ವಾಹನಕ್ಕೆ ಅಡ್ಡಗಟ್ಟಿ ನಿಲ್ಲಿಸಿ, ಕಾರಿನಲ್ಲಿದ್ದ ನಾಲ್ವರು ಬಂದು ತಮ್ಮೊಂದಿಗೆ ವ್ಯಾಜ್ಯ ತೆಗೆದಿದ್ದಾರೆ. ನಮ್ಮ ಕಾರಿಗೆ ಉಜ್ಜಿಕೊಂಡು ಬಂದಿದ್ದಿರಾ, ಒಮಿನಿಯಿಂದ ಕೆಳಗೆ ಇಳಿಯಿರಿ ಎಂದು ಮಾಲತೇಶ ಹಾಗೂ ಮಾನಾಚಾರಿ ಅವರಿಗೆ ಹೆದರಿಸಿದ್ದಾರೆ. ಇಬ್ಬರೂ ಓಮಿನಿಯಿಂದ ಹೊರಬರುತ್ತಿದ್ದಂತೆ ಹಲ್ಲೆ ನಡೆಸಿ, ಹಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಘಟನೆ ಬಗ್ಗೆ ವರ್ತಕ ಮಾಲತೇಶ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.








