ಉತ್ತನಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಗೆ ಅನಾಹುತಗಳು ಮುಂದುವರೆದಿದ್ದು, ಅಂಕೋಲಾದ ಶಿರೂರಿನಲ್ಲಿ ಮಂಗಳವಾರ ಗುಡ್ಡ ಕುಸಿತ ದುರಂತ ಸಂಭವಿಸಿದ್ದು, ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಕೂಡ ಧರೆ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಮಣ್ಣು ತೆರವು ಕಾರ್ಯಾಚರಣೆ ಸಾಗಿದೆ.
ಈ ಹಿಂದೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರೂ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿತ್ತು. ಆದರೆ, ಈ ಸಲ ಇನ್ನೂ ಒಂದು ದಿವಸ ಮಣ್ಣು ತೆರವುಗೊಳಿಸಲು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎರಡು ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗುತ್ತಿದ್ದು, ಅದನ್ನು ಟಿಪ್ಪರ್ ಮೂಲಕ ಸಾಗಿಸಿ ಸಮೀಪದಲ್ಲೇ ಡಂಪ್ ಮಾಡಲಾಗುತ್ತಿದೆ.
ಈ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಸಾಗರಮಾಲಾ ಯೋಜನೆ ಅಡಿ ಆರ್.ಎನ್.ಎಸ್. ಕಂಪನಿಯಿಂದ ಕಾಮಗಾರಿ ಮಾಡಲಾಗುತ್ತಿದೆ. ಕೆಲವೆಡೆ ಗುಡ್ಡಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡಿದ್ದು, ಪರಿಣಾಮ ಧರೆ ಕುಸಿತ ಸಂಭವಿಸಿದೆ. ಮುಖ್ಯವಾಗಿ ಜಿಲ್ಲೆಯ ಘಟ್ಟದ ಮೇಲಿನ ಭಾಗವನ್ನು ಕರಾವಳಿಗೆ ಸೇರಿಸುವ ರಸ್ತೆ ಇದಾಗಿದ್ದು, ಈಗ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ.
ರಸ್ತೆಯಲ್ಲಿ ಸಂಚಾರ ಮಾಡದಂತೆ ಶಿರಸಿ ಸಹಾಯಕ ಆಯುಕ್ತರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಕಟಣೆ ನೀಡಿದ್ದಾರೆ. ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಕರಾವಳಿ ಭಾಗಕ್ಕೆ ತೆರಳಲು ಯಲ್ಲಾಪುರ – ಅಂಕೋಲಾ ರಸ್ತೆ ಅಥವಾ ಶಿರಸಿ – ಯಾಣ – ಕುಮಟಾ ರಸ್ತೆಯನ್ನು ಬಳಸಬಹುದಾಗಿದೆ.