ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ಕಾರಿಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ದುರಂತದಿಂದ ಪಾರಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ಬೊಮ್ಮನಹಳ್ಳಿಯ ಸಮೀಪದ ರೂಪೇನ ಅಗ್ರಹಾರ ಬಳಿಯ ರಸ್ತೆಯಲ್ಲಿ ಹೊರಟಿದ್ದ ಎಸ್‌ಯುವಿ ಕಾರು ಒಮ್ಮೆಗೆ ನಿಂತುಕೊಂಡಿತು. ತಾಂತ್ರಿಕ ಸಮಸ್ಯೆ ಇರಬಹುದು ಎಂದು ಚಾಲಕ ಕಾರನ್ನು ಪುನರಾರಂಭಿಸಲು ಹೋದಾಗ ದಿಢೀರ್ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಚಾಲಕ ಅಲರ್ಟ್ ಆಗಿದ್ದು, ಕಾರಿನಿಂದ ಹೊರಗಡೆ ಬಂದು ಜೀವ ಉಳಿಸಿಕೊಂಡಿದ್ದಾರೆ.
ಅಲ್ಲೇ ಇದ್ದಂತ ಸಂಚಾರಿ ಪೊಲೀಸರು ಘಟನೆಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಬಂದ ಅಗ್ನಿ ಶಾಮಕ ದಳ ಸುಮಾರು ಅರ್ಧ ಗಂಟೆಯವರೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು.








