ರಾಯಚೂರು: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪೇಸಿಎಂ ಟೀಶರ್ಟ್ ಹಾಕಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದಿದ್ದ ಸಿಂದಗಿ ಯುವಕ ಅಕ್ಷಯ್ ಕುಮಾರ್ ಮತ್ತೊಂದು ವಿಭಿನ್ನ ಪ್ರತಿಭಟನೆ ನಡೆಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ರಾಯಚೂರಿನಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ತನ್ನ ಮೈಯೆಲ್ಲಾ 40% ಸರ್ಕಾರ, ಮೊಟ್ಟೆ ಹಗರಣ, ಪಿಎಸ್ ಐ ಸ್ಕ್ಯಾಮ್ ಸೇರಿದಂತೆ ಸರ್ಕಾರದ ಹಗರಣಗಳನ್ನು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಜಯಪುರ ಅಕ್ಷಯ್ ಕುಮಾರ್ ಭಾರತ್ ಜೋಡೋ ಯಾತ್ರೆಯಲ್ಲಿ ಪೇ ಸಿಎಂ ಟೀಶರ್ಟ್ ಹಾಕಿದ್ದರು. ಈ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅವರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು.
ಪೊಲೀಸರ ನಡೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ರಾಯಚೂರಿನಲ್ಲಿ ಅಕ್ಷಯ್ ಕುಮಾರ್ ವಿಭಿನ್ನವಾಗಿ ಸರ್ಕಾರದ ಹಗರಣಗಳನ್ನು ಮೈಮೇಲೆ ಬರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.