ಕೊಡಗು : ಇತ್ತೀಚಿಗೆ ಐಟಿ ಅಧಿಕಾರಿಗಳ ದಾಳಿಯ ಭೀತಿ ಹಾಗು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾನ್ಫಿಡೆಂಟ್ ಚೇರ್ಮನ್ ಖ್ಯಾತ ಉದ್ಯಮಿ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಕರ್ನಾಟಕದಲ್ಲಿ ಮತ್ತೊಬ್ಬ ಉದ್ಯಮಿ ತನ್ನ ಕುಟುಂಬದ ಜೊತೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಸಜೀರ್ ಎನ್ನುವ ವ್ಯಕ್ತಿ ಕಾರಿನಲ್ಲಿ ತನ್ನ ಕುಟುಂಬದ ಜೊತೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಘಟನೆಯಲ್ಲಿ ಸಜೀರ್ ಸಾವನ್ನಪ್ಪಿದ್ದು, ಸಜೀರ್ ಪತ್ನಿ ಹಾಗೂ ಅವರ ಇಬ್ಬರು ಮಕ್ಕಳನ್ನು ಸ್ಥಳೀಯರು ಕಾಪಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಡಗು ಮೂಲದ ಉದ್ಯಮಿ ಸಜೀರ್, ಕೇರಳದ ವಯನಾಡ್ ನಿವಾಸಿ ಬಾಪು ಎಂಬುವವರಿಗೆ ಸುಮಾರು 20 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ, ಸಾಲ ಪಡೆದಿದ್ದ ಬಾಪು ಹಣವನ್ನು ವಾಪಸ್ ನೀಡದೆ ಸಜೀರ್ ಅವರಿಗೆ ಹಲವು ತಿಂಗಳಿನಿಂದ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕಂಗಾಲಾಗಿದ್ದ ಸಜೀರ್, ಹಣ ವಾಪಸ್ ಪಡೆಯಲು ಅಂತಿಮ ಪ್ರಯತ್ನವಾಗಿ ಕುಟುಂಬ ಸಮೇತ ಬಾಪು ನಿವಾಸಕ್ಕೆ ತೆರಳಿದ್ದರು.
ಸಾಲಗಾರ ಬಾಪು ಅವರ ಮನೆ ಎದುರೇ ಉದ್ಯಮಿ ಸಜೀರ್ ಈ ನಿರ್ಧಾರ ಕೈಗೊಂಡಿದ್ದಾರೆ. ಕಾರಿನಲ್ಲಿ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯರು ನಜೀರ್ ಅವರ ಪತ್ನಿ ಮತ್ತು ಮಕ್ಕಳನ್ನು ಹೊರಗಡೆ ಎಳೆದು ರಕ್ಷಣೆ ಮಾಡಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ಸಜೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಘಟಕಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








