ಬೆಂಗಳೂರು: ರಾಜಧಾನಿಯ ಗಂಗೊಂಡನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದ್ದ ವಿವಾಹಿತ ಮಹಿಳೆಯ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ಚಂದ್ರಾ ಲೇಔಟ್ ಪೊಲೀಸರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಹಫೀಜ್‌ನನ್ನು ಬಂಧಿಸಿದ್ದಾರೆ. ತನ್ನನ್ನು ದೂರ ಮಾಡಿದ್ದಾಳೆ ಎಂಬ ಕೆರಳಿದ ಹತಾಶೆಯಲ್ಲಿ ಈತ ಫಿರ್ದೋಸ್ ಬಾನು ಎಂಬಾಕೆಯನ್ನು ಡ್ಯಾಗರ್‌ನಿಂದ ಇರಿದು ಕೊಲೆ ಮಾಡಿದ್ದಾನೆ.
ಪೊಲೀಸ್ ಠಾಣೆಯಲ್ಲೇ ನಡೆದಿತ್ತು ರಾಜಿ ಸಂಧಾನ! ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಮೃತ ಫಿರ್ದೋಸ್ ಬಾನು ಮತ್ತು ಆರೋಪಿ ಹಫೀಜ್ ನಡುವೆ ಈ ಹಿಂದೆ ಸ್ನೇಹವಿತ್ತು. ಈ ವಿಷಯ ಮಹಿಳೆಯ ಕುಟುಂಬಕ್ಕೂ ತಿಳಿದಿತ್ತು. ಕುಟುಂಬಸ್ಥರು ಬುದ್ಧಿವಾದ ಹೇಳಿದ ನಂತರ ಫಿರ್ದೋಸ್ ಆರೋಪಿಯಿಂದ ದೂರವಾಗಲು ಪ್ರಯತ್ನಿಸಿದ್ದರು. ಇದೇ ವಿಚಾರವಾಗಿ ಫೆಬ್ರವರಿ 28ರಂದು ಹಫೀಜ್ ಗಲಾಟೆ ಮಾಡಿದ್ದಾಗ, ಮಹಿಳೆಯ ಕುಟುಂಬ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿತ್ತು. ಆಗ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿಸಿ ಕಳುಹಿಸಿದ್ದರು. ಆದರೆ, ಪೊಲೀಸರ ಎಚ್ಚರಿಕೆಯನ್ನೂ ಮೀರಿ ಹಫೀಜ್ ಈ ಕೃತ್ಯ ಎಸಗಿದ್ದಾನೆ.
ಹಿಂಬಾಲಿಸಿ ಬಂದು 7 ಬಾರಿ ಇರಿತ: ಘಟನೆಯ ಕುರಿತು ಪಶ್ಚಿಮ ವಲಯ ಡಿಸಿಪಿ ಯತೀಶ್ ಅವರು ಮಾಹಿತಿ ನೀಡಿದ್ದು, “ಆರೋಪಿ ಹಫೀಜ್ ಮತ್ತು ಮೃತ ಫಿರ್ದೋಸ್ ಇಬ್ಬರಿಗೂ ಪ್ರತ್ಯೇಕ ಮದುವೆಯಾಗಿ ಮಕ್ಕಳಿದ್ದಾರೆ. ಯಾವುದೇ ಕೆಲಸವಿಲ್ಲದೆ ಅಲೆಯುತ್ತಿದ್ದ ಹಫೀಜ್, ನಿನ್ನೆ ಸಂಜೆ ಫಿರ್ದೋಸ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದಿದ್ದಾನೆ. ದಾರಿಯಲ್ಲಿ ತಡೆದು ಸುಮಾರು ಆರೇಳು ಬಾರಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ,” ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ.
ದೇಶದಲ್ಲಿ ‘LPG ಅಭಾವ’ಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಸಚಿವ ಬೋಸರಾಜು ಗಂಭೀರ ಆರೋಪ
BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ








