ಬೆಂಗಳೂರು : ರಾಜ್ಯದಲ್ಲಿರುವ ಪ್ರತಿಯೊಂದು ಮಸೀದಿಗಳನ್ನು ಕೆಡವಿ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಯಿಂದ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಅವರೇ ಜವಾಬ್ದಾರಿಯಾಗಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರ ಹೇಳಿಕೆಗೆ ಇದೀಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಟ್ವೀಟ್ ನಲ್ಲಿ ಈ ಕುರಿತು ಯತ್ನಾಳ್ ಅವರು ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೋಮು ಗಲಭೆಗೆ ಜವಾಬ್ದಾರರಾದ ‘ಬಾಂಧವರನ್ನು’ ಜೈಲಿಂದ ಖುಲಾಸೆಗೊಳಿಸುವುದರಿಂದ ಆಗುವ ಕಾನೂನು ಸುವ್ಯವಸ್ಥೆಯ ಸಮಸ್ಯೆಗೆ ಗೃಹ ಮಂತ್ರಿಗಳು ಜವಾಬ್ದಾರಿ/ಉತ್ತರದಾಯಿಗಳಾದರೆ ಹೆಗ್ಡೆ ಅವರು ಸಹ ಒಬ್ಬ ಜವಾಬ್ದಾರಿಯುತ ಸಂಸದರಾಗಿ, ರಾಷ್ಟ್ರ ಪ್ರೇಮಿಗಳಾಗಿ ತಮ್ಮ ಮಾತುಗಳಿಗೆ ಉತ್ತರದಾಯಿಗಳಾಗುತ್ತಾರೆ ಗೃಹ ಸಚಿವರೇ
ಗೃಹ ಸಚಿವರು ಹೇಳಿದ್ದೇನು?
ರಾಜ್ಯದ ಒಬ್ಬ ಸಂಸದರಾಗಿರುವ ಹಾಗೂ ಕೇಂದ್ರ ಸರ್ಕಾರ ಮಾಜಿ ಸಚಿವರೂ ಆಗಿರುವ ಅನಂತ ಕುಮಾರ್ ಹೆಗಡೆ ಅವರು ಅವಹೇಳನಕಾರಿಯಾಗಿ, ಬೇರೆಯವರ ಬಗ್ಗೆ ಹೀಯಾಳಿಸಿ, ಅಸಂಬದ್ಧವಾಗಿ ಹಾಗೂ ಪ್ರಚೋದನಕಾರಿಯಾಗಿ ಮಾತನಾಡುವುದನ್ನು ಪೊಲೀಸ್ ಇಲಾಖೆ ಕಾನೂನು ರೀತಿಯಲ್ಲಿ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಅವರೇ ನೇರ ಜವಾಬ್ದಾರಿ ಆಗುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಪ್ರಚೋದನಕಾರಿ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿ ನಮ್ಮದು. ಯಾರೇ ಆದರೂ ವೈಯಕ್ತಿಕವಾಗಿ ಏನಾದರೂ ಮಾತನಾಡಿ. ಆದರೆ, ಸಮಾಜದ ಶಾಂತಿ ಕದಡುವಂತಹ ಕೆಲಸ ಮಾಡಬಾರದು. ಪೊಲೀಸ್ ಇಲಾಖೆಯ ಕಾರ್ಯ ಅವರಿಗೆ ಗೊತ್ತಿದೆ. ಮುಖ್ಯಮಂತ್ರಿ ಹಾಗೂ ಇತರೆ ಸರ್ಕಾರದ ಜವಾಬ್ದಾರಿಯುತ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಸಂಸ್ಕೃತಿಯಾಗಿರುತ್ತದೆ. ಚುನಾವಣೆ ಹತ್ತಿರ ಬಂದಿದ್ದರಿಂದ ಇಂತಹ ಹೇಳಿಕೆಗಳನ್ನು ನಿಡುತ್ತಿದ್ದಾರೆ ಎಂದು ಕಿಡಿಕಾರಿದರು.