ಶಿವಮೊಗ್ಗ: ಇತ್ತೀಚೆಗೆ ನಡೆದ ಪ್ರತಿಷ್ಠಿತ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ ಆನಂದ್ ಎಂ.ಡಿ ಅವರಿಗೆ ಹರಳಯ್ಯ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಸಮಾಜದ ಮುಖಂಡರು ಹಾಗೂ ಹಿರಿಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ್ ಅವರ ಜನಪರ ಕಾಳಜಿ ಮತ್ತು ಚುನಾವಣಾ ಯಶಸ್ಸನ್ನು ಶ್ಲಾಘಿಸಲಾಯಿತು. ಸಮಾಜದ ಪ್ರಮುಖರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಕೃತಜ್ಞತೆ ಸಲ್ಲಿಸಿದ ಆನಂದ್ ಎಂ.ಡಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ್ ಎಂ.ಡಿ ಅವರು, “ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಸಮಸ್ತರಿಗೂ ಹಾಗೂ ಈ ಯಶಸ್ಸಿಗೆ ಕಾರಣರಾದ ನನ್ನ ಹರಳಯ್ಯ ಸಮಾಜದ ಬಂಧುಗಳಿಗೆ ನಾನು ಚಿರಋಣಿ. ನನ್ನನ್ನು ಪ್ರೀತಿಯಿಂದ ಸನ್ಮಾನಿಸಿದ ಸಮಾಜದ ಎಲ್ಲಾ ಮುಖಂಡರುಗಳಿಗೆ ಮತ್ತು ಹಿರಿಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಹಾಗೂ ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರಳಯ್ಯ ಸಮಾಜದ ಪ್ರಮುಖ ಮುಖಂಡರು, ಹಿತೈಷಿಗಳು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








