ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ಆಗುತ್ತಿದ್ದು ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಕುರಿತು ಹೊಸ ಚರ್ಚೆಗಳು ಆಗುತ್ತಿದ್ದು, ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕವಾದ ಹೇಳಿಕೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಬಿಜೆಪಿಯಿಂದ ನನಗೆ ಡಿಸಿಎಂ ಆಫರ್ ಬಂದಿತ್ತು ಆದರೆ ನಾನು ಪಕ್ಷದ ನಿಷ್ಠೆಗಾಗಿ ಜೈಲನ್ನೇ ಆಯ್ಕೆ ಮಾಡಿಕೊಂಡೆ ಎಂದು ಹೊಸ ಬಾಂಬ್ ಸಿಡಿಸಿದರು.
ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಲೇಖಕ ಕೆ.ಎಂ. ರಘು ಅವರು ರಚಿಸಿದ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ. ಶಿವಕುಮಾರ್’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ನಾನು ಪ್ರಯತ್ನಿಸುತ್ತಿದ್ದಾಗ, ಬಿಜೆಪಿಯ ಹಿರಿಯ ನಾಯಕರೊಬ್ಬರು ನನಗೆ ಉಪಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪದಿದ್ದಲ್ಲಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದರು.
ಆದರೆ, ನಾನು ನನ್ನ ಪಕ್ಷದ ನಿಷ್ಠೆಗೆ ಬದ್ಧನಾಗಿ ಜೈಲನ್ನೇ ಆಯ್ದುಕೊಂಡೆ. ಒಂದು ವೇಳೆ ಅಂದು ನಾನು ಡಿಸಿಎಂ ಸ್ಥಾನಕ್ಕೆ ಆಸೆಪಟ್ಟು ಹೋಗಿದ್ದರೆ, ರಾಜ್ಯದ ರಾಜಕೀಯ ಚಿತ್ರಣವೇ ಇಂದು ಸಂಪೂರ್ಣವಾಗಿ ಬದಲಾಗಿರುತ್ತಿತ್ತು ಎಂದು ತಿಳಿಸಿದರು.ನನ್ನ ವಿರೋಧಿಗಳು ಮಾಡುವ ಆರೋಪಗಳು ಅವರಿಗೆ ಸಂತೋಷ ಕೊಡುತ್ತದೆ ಎಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಹಳ್ಳಿಯಿಂದ ಬಂದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ನಾನು ಸದಾ ಆಭಾರಿಯಾಗಿದ್ದೇನೆ ಎಂದರು.