ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಸೇವೆ ನೀಡುವುದು, ಅವರೊಂದಿಗೆ ಉತ್ತಮ ನಡೆ ತೋರಬೇಕು. ಅದ್ಯಾವುದೇ ರೋಗಿ ಆಗಿದ್ದರೂ ಪರೀಕ್ಷಿಸಿ, ಚಿಕಿತ್ಸೆ ನೀಡುವುದು ಕಡ್ಡಾಯ. ಆದರೇ ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲೊಬ್ಬ ಇದಕ್ಕೆ ವ್ಯತಿರಿಕ್ತ ವೈದ್ಯನಿದ್ದಾನೆ. ರೋಗಿಗಳು ಬಂದಾಗ ತಾನು ತುಂಬಾ ಬ್ಯುಸಿ ಇದ್ದೇನೆ ಅನ್ನೋ ಥರ ಪೋಸ್ ಕೊಟ್ಟು, ಗಂಟೆಗಟ್ಟಲೇ ಸತಾಯಿಸಿ ಚಿಕಿತ್ಸೆ ಕೊಡ್ತಾನಂತೆ. ಅಲ್ಲದೇ ಆಡಳಿತ ವೈದ್ಯಾಧಿಕಾರಿ ಸೂಚಿಸಿದ್ರೂ ಅವರ ಮಾತಿಗೆ ಸೊಪ್ಪು ಕೂಡ ಹಾಕದೇ ದುರ್ವರ್ತನೆ ತೋರಿರೋ ಘಟನೆ ನಡೆದಿದೆ.
ಸಾಗರದ ಸಾಮಾಜಿಕ ಕಾರ್ಯಕರ್ತ ಜಮೀನ್ ಸಾಗರ್ ಎಂಬುವರು ಶಾಲಾ ವಿದ್ಯಾರ್ಥಿಯೋರ್ವನಿಗೆ ಅನಾರೋಗ್ಯವಾಗಿತ್ತು. ಕೂಡಲೇ ಮಾನವೀಯತೆ ಎನ್ನುವಂತೆ ಸಮೀಪದಲ್ಲಿದ್ದಂತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಕರ್ತವ್ಯದಲ್ಲಿದ್ದಂತ ಡಾ.ಗಣೇಶ್ ಗೆ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ. ಆದರೇ ಅನಾರೋಗ್ಯಕ್ಕೆ ಒಳಗಾಗಿದ್ದಂತ ವಿದ್ಯಾರ್ಥಿಗೆ ಚಿಕಿತ್ಸೆ ನೀಡಬೇಕಾಗಿದ್ದಂತ ಈ ವೈದ್ಯ ಮಾತ್ರ, ನಾನು ಬ್ಯುಸಿ ಇದ್ದೇನೆ. ಇನ್ನೂ ಲೇಟ್ ಆಗುತ್ತದೆ. ಹಾಗೆ, ಹೀಗೆ ಅಂತ ಕತೆ ಹೊಡೆದಿದ್ದಾರೆ.
ಶಾಲಾ ವಿದ್ಯಾರ್ಥಿಯು ಅನಾರೋಗ್ಯದಿಂದ ನರಳುತ್ತಿದ್ದ ಕಾರಣ, ಕೂಡಲೇ ಚಿಕಿತ್ಸೆ ಅಗತ್ಯವಿತ್ತು. ಇದನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರ ಗಮನಕ್ಕೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ತಂದಿದ್ದಾರೆ. ಕೂಡಲೇ ವಿದ್ಯಾರ್ಥಿಗೆ ಚಿಕಿತ್ಸೆ ನೀಡುವಂತೆ ಡಾ.ಗಣೇಶ್ ಗೆ ಸೂಚಿಸಿದರೂ, ಮತ್ತೆ ಅದೇ ಕತೆ, ಕಾಯುವಂತೆ ಸೂಚನೆ. ಚಿಕಿತ್ಸೆ ನೀಡದೇ ದುರಹಂಕಾರದ ವರ್ತನೆ ತೋರಿದ್ದಾರೆ.
ವೈದ್ಯ ಡಾ.ಗಣೇಶ್ ಈಗ ಚಿಕಿತ್ಸೆ ಕೊಡ್ತಾರೆ. ಆಗ ಚಿಕಿತ್ಸೆ ಕೊಡ್ತಾರೆ ಅಂತ ಸುಮಾರು ಹೊತ್ತು ಕಾದರು ಚಿಕಿತ್ಸೆ ಕೊಟ್ಟೇ ಇಲ್ಲ. ವಿದ್ಯಾರ್ಥಿ ಅನಾರೋಗ್ಯದಿಂದ ನರಳಾಡುತ್ತಿದ್ದರೂ ಚಿಕಿತ್ಸೆ ಕೊಡದೇ ಸತಾಯಿಸಿದ ಕಾರಣ ಅಲ್ಲಿಂದ ಕರೆದೊಯ್ದು ಬೇರೆಡೆ ಸಕಾಲದಲ್ಲಿ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಡೂರಾವ್ ಸಾಹೇಬ್ರೆ ಏನಿದು ನಿಮ್ಮ ಇಲಾಖೆ ವೈದ್ಯನ ದುರಹಂಕಾರ?
ಸಾಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಗಣೇಶ್ ದುರಹಂಕಾರದ ನಡೆ ಇದೇನು ಮೊದಲಲ್ಲ. ಇಲ್ಲಿಗೆ ಸಾಗರ, ಸಿದ್ದಾಪುರ, ಹೊಸನಗರ, ಶಿರಸಿಯಿಂದ ರೋಗಿಗಳು ಆಗಮಿಸಿದಾಗಲೂ ಇದೇ ನಡೆ ಅನ್ನೋದು ಜನರ ಮಾತು. ಸರ್ಕಾರಿ ಕೆಲಸ ಮಾಡೋದಕೆ ಇಷ್ಟ ಇಲ್ಲದೇ ಇದ್ದರೇ ಬಿಟ್ಟೋಗಲಿ. ಸಾವಿರಾರು ವೈದ್ಯರು ಸಾರ್ವಜನಿಕರ ಸೇವೆ ಮಾಡೋದಕ್ಕೆ ಸಿದ್ಧರಿದ್ದಾರೆ. ವೈದ್ಯ ಡಾ.ಗಣೇಶ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ.
ನಾಳೆ ಆಸ್ಪತ್ರೆ ಎದುರು ಪ್ರತಿಭಟನೆ
ಡಾ.ಗಣೇಶ್ ಅವರ ದುರಂಹಕಾರದ ನಡೆಯನ್ನು ಖಂಡಿಸಿ ನಾಳೆ ಸಾಗರದ ಸಾರ್ವಜನಿಕ ಆಸ್ಪತ್ರೆಯ ಎದುರು ವಿದ್ಯಾರ್ಥಿಗಳ ಜೊತೆಗೂಡಿ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಪ್ರತಿಭಟನೆ ನಡೆಸಲಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರ ಸೂಚನೆಗೂ ಸ್ಪಂದಿಸದೇ ಚಿಕಿತ್ಸೆ ನೀಡದೇ ಕಳುಹಿಸಿದಂತ ದುರಹಂಕಾರಿ ವೈದ್ಯ ಡಾ.ಗಣೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಲಿದ್ದಾರೆ.
ಶಾಸಕ ಬೇಳೂರು ಗೋಪಾಲಕೃಷ್ಣ, ಆರೋಗ್ಯ ರಕ್ಷಾ ಸಮಿತಿಯವರೇ ನಿಮ್ಮ ನಡೆ ಏನು?
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಎಲ್ಲಿಲ್ಲದ ಕಾಳಜಿ, ಅಷ್ಟೇ ಉತ್ತಮ ಚಿಕಿತ್ಸೆಯನ್ನು ರೋಗಿಗಳಿಗೆ ನೀಡುವ ಸೌಲಭ್ಯ ಕೂಡ ಕಲ್ಪಿಸಿದ್ದಾರೆ. ಶಾಸಕರಾದ ನಂತ್ರ ಆಸ್ಪತ್ರೆ ಈಗಾಗಲೇ ಹತ್ತಾರು ಬಾರಿ ಭೇಟಿ ನೀಡಿ, ರೋಗಿಗಳನ್ನು ಮಾತನಾಡಿಸಿ, ಆರೋಗ್ಯ ಸೇವೆಗೆ ಏನೆಲ್ಲಾ ಬೇಕೋ ಅದನ್ನು ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದಾರೆ.
ಹಾಗಾದ್ರೇ ಸಾರ್ವಜನಿಕ ಆಸ್ಪತ್ರೆಯಲ್ಲಿನ ಈ ದುರಹಂಕಾರಿ ವೈದ್ಯ ಡಾ.ಗಣೇಶ್ ಈ ನಡೆ ಗಮನಕ್ಕೆ ಬಂದಿಲ್ವ? ಆರೋಗ್ಯ ರಕ್ಷಾ ಸಮಿತಿಯವರಾದರೂ ಶಾಸಕರ ಗಮನಕ್ಕೆ ತಂದು ರೋಗಿಗಳಿಗೆ ಚಿಕಿತ್ಸೆ ನೀಡಲು ಸತಾಯಿಸುವ ವೈದ್ಯನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿಲ್ವ ಎಂಬುದೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗಾದ್ರೇ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನಡೆ ಏನು.? ಆರೋಗ್ಯ ರಕ್ಷಾ ಸಮಿತಿಯವರು ಏನು ಹೇಳ್ತಾರೆ ಈ ಬಗ್ಗೆ ಎಂಬುದನ್ನು ಕಾದು ನೋಡಬೇಕಿದೆ.
ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಹೇಳಿದ್ದೇನು?
ವೈದ್ಯರು ಅಂದರೆ ದೇವರ ತರ ನೋಡುತ್ತೇವೆ. ಆದರೆ ದೇವರೇ ರಾಕ್ಷಸ ರೀತಿ ವರ್ತಿಸುತಿದ್ದಾರೆ. ವೈದ್ಯ ಗಣೇಶ್ ವಿರುದ್ದು ನಾಳೆ ವಿದ್ಯಾರ್ಥಿಗಳ ಜೊತೆಗೆ ಸರ್ಕಾರಿ ಆಸ್ಪತ್ರೆ ಎದುರು ರೋಗಿಗಳಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸಲಾಗುತ್ತದೆ. ಡಾ.ಗಣೇಶ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೇ ಟಿಹೆಚ್ಓ, ಡಿಹೆಚ್ಓ ಕಚೇರಿಯ ಮುಂದೆಯೂ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ