ಫಿಲಡೆಲ್ಫಿಯಾ: ಅಮೆರಿಕದ ಪಶ್ಚಿಮ ಫಿಲಡೆಲ್ಫಿಯಾದ ಕಾಬ್ಸ್ ಕ್ರೀಕ್ (Cobbs Creek) ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಿಂತಿದ್ದ ಜನರ ಗುಂಪನ್ನು ಗುರಿಯಾಗಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಕಾಬ್ಸ್ ಕ್ರೀಕ್ ಪಾರ್ಕ್‌ವೇ ಬಳಿ ಈ ಘಟನೆ ನಡೆದಿದೆ. ಕನಿಷ್ಠ 50ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಗುಂಡೇಟಿನಿಂದಾಗಿ 20ರ ಆಸುಪಾಸಿನ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಉಳಿದ ಮೂವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಫಿಲಡೆಲ್ಫಿಯಾ ಪೊಲೀಸರು ಇಡೀ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ದಾಳಿ ನಡೆಸಿದವರು ಯಾರು ಮತ್ತು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ. ಸದ್ಯಕ್ಕೆ ಯಾರನ್ನೂ ಬಂಧಿಸಲಾಗಿಲ್ಲ.
ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ದಾಳಿಕೋರರು ವಾಹನವೊಂದರಲ್ಲಿ ಬಂದು ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.








