ಬೆಂಗಳೂರು : ಇತ್ತೀಚಿಗೆ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೂರು ಜಿಲ್ಲೆಗಳಲ್ಲಿ ಕೆಲವು ಕಿಡಿಗೇಡಿಗಳು ಪ್ಯಾಲೆಸ್ಥಿನ್ ಪರ ಧ್ವಜ ಹಾರಾಟ ನಡೆಸಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಜಿಲ್ಲೆಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿರುವುದು ಕಂಡು ಬಂದಿದೆ. ಈ ಪ್ರಕರಣಗಳಲ್ಲಿ ಎಲ್ಲರನ್ನು ಬಂಧಿಸಲಾಗಿದೆ.ಕೇಂದ್ರ ಸರ್ಕಾರ ಪ್ಯಾಲೆಸ್ತೀನ್‌ಗೆ ಬೆಂಬಲಿಸುತ್ತೇವೆ ಎಂದು ಹೇಳಿಕೆ ಕೊಟ್ಟಿದೆ. ಹೀಗಾಗಿ ಇದರಲ್ಲಿ ನಮ್ಮ ತಪ್ಪೇನಿದೆ ಎಂದು ವಾದಿಸಿದ್ದಾರೆ. ಆದಾಗ್ಯೂ ಸಹ ಅವರನ್ನು ಬಂಧಿಸಿದ್ದೇವೆ ಎಂದು ಅವರು ತಿಳಿಸಿದರು.
ಯಾರು ಈ ಸಂದರ್ಭದಲ್ಲಿ ನಿಮಗೆ ಪ್ರಚೋದನೆ ಮಾಡಿ, ಬಾವುಟ ಹಾರಿಸಲು ಹೇಳಿದರು ಎಂಬ ಕುರಿತು ಬಂಧಿತರ ವಿಚಾರಣೆ ನಡೆಯುತ್ತಿದೆ. 17ರಿಂದ 21ವರ್ಷ ವಯಸ್ಸಿನ ಹುಡುಗರು ಇದನ್ನು ಮಾಡಿದ್ದಾರೆ ಎಂದರು. ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಹಬ್ಬದಂದು ಕೆಲವು ಕಿಡಿಗೇಡಿಗಳು ಪ್ಯಾಲೆಸ್ತೀನ್ ಪರ ಧ್ವಜ ಹಾರಾಟ ನಡೆಸಿದ್ದರು. ಹಾಗಾಗಿ ಧ್ವಜ ಹಾರಿಸಿದವರನ್ನು ಈಗ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.