ಬೆಂಗಳೂರು : ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಸಿಎಂ ಮನೆಗೆ ಬಿಜೆಪಿ ನಾಯಕರ ಮುತ್ತಿಗೆ ವಿಚಾರವಾಗಿ, ನಮ್ಮ ಕಾಲದಲ್ಲಿ ಯಾವ ಹಗರಣವೂ ಆಗಿಲ್ಲ. ಎಲ್ಲಾ ಬಿಜೆಪಿ ಅವರ ಕಾಲದಲ್ಲೇ ಆಗಿರೋದು. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡಿದ್ರೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆಶಿ ತಿರುಗೇಟು ನೀಡಿದರು.
ಚನ್ನಪಟ್ಟಣ ತಾಲೂಕಿನ ಭೈರಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ೪ ಸಾವಿರ ಕೋಟಿ ರು. ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು. ಸಿಎಂ ಪತ್ನಿ ವಿರುದ್ಧವೂ ಅಕ್ರಮ ಸೈಟ್ ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೆಂಡತಿ ಯಾಕೆ ಅಕ್ರಮ ಮಾಡುತ್ತಾರೆ? ಅವರ ಆಸ್ತಿ ಮುಡಾಗೆ ಭೂ ಸ್ವಾಧೀನ ಅಗಿದೆ. ಅದಕ್ಕೆ ಪರ್ಯಾಯ ಜಾಗ ಕೊಡಬೇಕು. ಹಾಗಾಗಿ ಅವರಿಗೆ ಸೈಟ್ ಕೊಟ್ಟಿರುತ್ತಾರೆ. ಬಿಜೆಪಿಯವರ ಆಡಳಿತದಲ್ಲೇ ಸೈಟ್ ಕೊಟ್ಟಿದ್ದಾರೆ. ಅವರು ಡಿನೋಟಿಫಿಕೇಷನ್ ಮಾಡಿಕೊಂಡಿಲ್ಲ ಎಂದರು.
ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತೆ : ಡಿಸಿಎಂ ಡಿಕೆ
ಇನ್ನು ಚನ್ನಪಟ್ಟಣ ಬೆಂಗಳೂರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣವನ್ನ ಬದಲಾವಣೆ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಡವರಿಗೆ ಸೈಟ್ ಹಂಚಿಲ್ಲ, ಮನೆ ಕೊಟ್ಟಿಲ್ಲ, ರಸ್ತೆ ಸರಿ ಇಲ್ಲ. ನಗರಸಭೆ, ತಾಲೂಕು ಕಚೇರಿಗೆ ಒಳ್ಳೆಯ ಕಟ್ಟಡ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.