ಬೆಂಗಳೂರು : ಐದು ಗ್ಯಾರಂಟಿ ಕೊಟ್ಟು ಐವತ್ತು ಕಡೆ ಕಿತ್ತುಕೊಂಡಿದ್ದಾರೆ. ಹಾಲು ಮತ್ತು ಆಲ್ಕೋಹಾಲ್ ಗೂ ದರ ಏರಿಕೆ ಮಾಡಿದ್ದಾರೆ. ಪಹಣಿ, ಬರ್ತ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್, ಪೆಟ್ರೋಲ್, ಡೀಸಲ್ ದರ ಏರಿಕೆ ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚು ಮಾಡಿದ್ದಾರೆ. ಈಗ ಬಸ್ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇನ್ನು ಅವರಿಗೆ ಉಳಿದಿರೋದು ಗಾಳಿಗೆ ಟ್ಯಾಕ್ಸ್ ಹಾಕಬೇಕು, ಸತ್ತವರ ಮೇಲೆ ಟ್ಯಾಕ್ಸ್ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು.
ಇಂದು ಅವರು ಸುದ್ಧಿಗಾರರೊಂದಿಗೆ ಮಾತನಾಡಿ,ಸಿಎಂ ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಜನ ಮತ ಹಾಕಿಲ್ಲ ಅಂತ ಜನರ ಮೇಲೆ ಬೆಲೆ ಏರಿಕೆ ಬರೆ ಹಾಕಿದ್ದಾರೆ.ದಿನ ಬೆಳಗಾಗೋದ್ರೊಳಗೆ ವಸ್ತುಗಳ ಎಲ್ಲಾ ಬೆಲೆ ಏರಿಕೆ ಆಗಿದೆ. ಹಣ ದುಬ್ಬರದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಜಾಸ್ತಿಯಾಗಿದೆ. ಹಗರಣ ಮುಚ್ಚಿ ಹಾಕಲು ಶಾಸಕರನ್ನ ಜೊತೆ ನಿಲ್ಲಲು ಒತ್ತಡ ಹಾಕುತ್ತಿದ್ದಾರೆ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಸರ್ಪೋಟ್ ಇಲ್ಲದೆ ಇಷ್ಟು ಅವ್ಯವಹಾರ ನಡೆಯುತ್ತಾ, ಇದಕ್ಕೆಲ್ಲಾ ಸಿಎಂ ನೇರ ಹೊಣೆ ಇದ್ದಾರೆ ಎಂದು ಸಿ.ಟಿ.ರವಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪಾರದರ್ಶಕ ಭ್ರಷ್ಟ ಆಡಳಿತ ಜಾರಿ
ಸಿದ್ದರಾಮಯ್ಯನವರು ರಾಜ್ಯದಲ್ಲಿ ಪಾರದರ್ಶಕ ಭ್ರಷ್ಟ ಆಡಳಿತವನ್ನು ಜಾರಿ ಮಾಡಿದ್ದಾರೆ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಅಧಿವೇಶನದ ಕಲಾಪ ಆರಂಭಕ್ಕೂ ಮೊದಲು ಪರಿಷತ್ತಿನ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರವಿ, ಪಾರದರ್ಶಕ ಪ್ರಾಮಾಣಿಕ ಆಡಳಿತ ಅಲ್ಲ. ಪಾರದರ್ಶಕ ಭ್ರಷ್ಟ ಆಡಳಿತ ಇದು ಎಂದು ಲೇವಡಿ ಮಾಡಿದರು.