ಚಾಮರಾಜನಗರ : ಈಕೆ ಅಂತಿಂಥ ಭಿಕ್ಷುಕಿಯಲ್ಲ, ಚಿಕ್ಕ ಚಿಕ್ಕ ಕಂದಮ್ಮಗಳಿರುವ ಮಹಿಳೆಯರನ್ನು ಪರಿಚಯಿಸಿಕೊಂಡು ಬಳಿಕ ಅವರಿಂದ ಮಗುವನ್ನು ಅಪಹರಿಸಿ ಭಿಕ್ಷಾಟನೆ ಮಾಡುತ್ತಿದ್ದ ಕಳ್ಳ ಬಿಕ್ಷುಕಿಯನ್ನು ಇದೀಗ ಚಾಮರಾಜನಗರ ಜಿಲ್ಲೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಪುಟ್ಟ ಕಂದಮ್ಮಗಳನ್ನು ಅಪಹರಿಸಿ ಭೀಕ್ಷಾಟನೆ ಮಾಡುತ್ತಿದ್ದ ಆರೋಪಿಯನ್ನು ರಾಧಾ (28) ಎಂದು ತಿಳಿದುಬಂದಿದೆ. ಈಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಅನಿತಾಳನ್ನು ತನ್ನ ಹೆಸರು, ವಿಳಾಸ ತಿಳಿಸದೆ ಪರಿಚಯ ಮಾಡಿಕೊಂಡಿದ್ದಳು. ಅನಿತಾಳ ಮಗುವನ್ನು ಭಿಕ್ಷೆ ಬೇಡಲು ಪಡೆದುಕೊಂಡು ಹಣ ಕೊಟ್ಟು ಆಸೆ ತೋರಿಸಿದ್ದಳು.
ಬಳಿಕ ನವೆಂಬರ್ 14ರಂದು ಚಾಮರಾಜನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಅನಿತಾಳಿಂದ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಳು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಆರೋಪಿ ರಾಧಾ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಧಾಳನ್ನು ವಿಚಾರಣೆಗೊಳಪಡಿಸಿದಾಗ ಮಗುವನ್ನು ಅಪಹರಿಸಿಕೊಂಡು ಹೋಗಿ ಕಳೆದ 4 ದಿನಗಳಿಂದ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಇಲಾಖೆಯ ಮುಂದೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.