ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದದ್ದು, ಸೈಬರ್ ವಂಚಕರು ಮನಿ ಲ್ಯಾಂಡ್ ರಿಂಗ್ ಆರೋಪದ ಹೆಸರಿನಲ್ಲಿ ಕರೆ ಮಾಡಿ, ಡಿಜಿಟಲ್ ಬಂಧನಕ್ಕೊಳಪಡಿಸಿ ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ವಂಚನೆಗೊಳಗಾಗಿರುವುದು ತಿಳಿಯುವ ಮುನ್ನವೇ ಸಂತ್ರಸ್ತರಿಂದ 58,477 ರೂ. ಹಣವನ್ನೂ ವಂಚಕರು ವರ್ಗಾಯಿಸಿಕೊಂಡಿದ್ದಾರೆ. 9 ಗಂಟೆಗಳ ಕಾಲ ಕಿರುಕುಳಕ್ಕೊಳಗಾದ ಸ್ನೇಹಿತೆಯರು ಕೊನೆಗೆ ಬೆಂಗಳೂರಿನ ಪೂರ್ವ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಬೋಧಕರಾಗಿರುವ ಮಹಿಳೆ ತನ್ನ ಬಾಲ್ಯ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮಹಿಳೆಗೆ ಜುಲೈ 17ರಂದು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಅನಾಮಧೇಯ ಕರೆ ಬಂದಿದೆ.ಈ ವೇಳೆ ಸೈಬರ್ ವಂಚಕ ಜಟ್ ಏರ್ವೇಸ್ ಗೆ ಸಂಬಂಧಿಸಿದಂತೆ ಹಣ ವರ್ಗಾವಣೆಯಲ್ಲಿ ನೀವು ಭಾಗಿಯಾಗಿದ್ದೀರಿ. ಮನಿ ಲ್ಯಾಂಡರಿಂಗ್, ಕಳ್ಳ ಸಾಗಣೆ ಅತ್ತೆ ಪ್ರಕರಣಕ್ಕೂ ಲಿಂಕ್ ಇದೆ ಎಂದು ಹೆದರಿಸಿದ್ದಾನೆ.
ಮಹಿಳೆಯ ಡೆಬಿಟ್ ಕಾರ್ಡ್‌ನ ವಿವರಗಳನ್ನು ಸರಿಯಾಗಿ ಹಂಚಿಕೊಂಡ ಆರೋಪಿ ಆಕೆಯನ್ನು ಹಾಗೂ ಆಕೆಯ ಸ್ನೇಹಿತೆಯನ್ನು ಬಂಧಿಸುವುದಾಗಿ ಬೆದರಿಸಿದ್ದಾನೆ.ಬಳಿಕ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿದ್ದ ಆರೋಪಿ ನಕಲಿ ಬಂಧನ ವಾರೆಂಟ್, ಕೇಂದ್ರ ತನಿಖಾ ದಳದ ಗುರುತಿನ ಚೀಟಿಗಳು ಸೇರಿದಂತೆ ಅಧಿಕೃತವಾಗಿ ಕಾಣುವ ದಾಖಲೆಗಳನ್ನು ತೋರಿಸಿದಾಗ ಭಯಭೀತರಾದ ಸ್ನೇಹಿತೆಯರಿಬ್ಬರೂ ಆತ ಹೇಳಿದಂತೆ ತಮ್ಮ ಖಾತೆಯಲ್ಲಿದ್ದ 58,477 ರೂ. ಹಣವನ್ನು ಆರೋಪಿ ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ.
ಬಳಿಕ ದೈಹಿಕ ತಪಾಸಣೆಯ ಅಗತ್ಯವಿದೆ ಎಂದು ಇಬ್ಬರನ್ನೂ ವಿವಸ್ತ್ರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಆತ ಹೇಳಿದಂತೆ ಮೈಮೇಲಿನ ಜನ್ಮ ಗುರುತುಗಳನ್ನು ತೋರಿಸುವ ಅನಿವಾರ್ಯತೆಗೆ ಸಿಲುಕಿದ ಸ್ನೇಹಿತೆಯರಿಬ್ಬರೂ ಕ್ಯಾಮರಾ ಮುಂದೆ ವಿವಸ್ತ್ರಗೊಂಡಿದ್ದಾರೆ. ದೈಹಿಕ ತಪಾಸಣೆಯ ನೆಪದಲ್ಲಿ ಮಹಿಳೆಯರಿಬ್ಬರೂ ನಗ್ನರಾಗಿದ್ದುದನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿ, ನಂತರ ಆ ವಿಡಿಯೋಗಳನ್ನು ಕಳಿಸಿ ಸಾರ್ವಜನಿಕವಾಗಿ ಹರಿಬಿಡುವುದಾಗಿ ಬೆದರಿಸಿದ್ದಾನೆ. 9 ಗಂಟೆಗಳ ಕಾಲ ತೀವ್ರ ಭಯ ಮತ್ತು ಅವಮಾನ ಎದುರಿಸಿದ್ದ ಮಹಿಳೆಯರು ಕೊನೆಗೆ ಪೂರ್ವ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.