ದಾವಣಗೆರೆ : ವಧು ವರರಿಗೆ ಈ ಮ್ಯಾಟ್ರಿಮೊನಿ ಸಾಮಾಜಿಕ ಜಾಲತಾಣ ಒಂದು ಉತ್ತಮ ವೇದಿಕೆಯಾಗಿದೆ. ಆದರೆ ಇದರಲ್ಲಿ ಕೂಡ ಈಗ ವಂಚನೆ, ಮೋಸ ಪ್ರಕರಣಗಳು ನಡೆಯುತ್ತವೆ. ಹೌದು ದಾವಣಗೆರೆಯಲ್ಲಿ ವಂಚಕನೊಬ್ಬ ಮ್ಯಾಟ್ರಿಮೋನಿಯಲ್ಲಿ ಪರಿಚಯಿಸಿಕೊಂಡು ಯುವತಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ಅವರಿಂದ 62 ಲಕ್ಷ ಪೀಕಿ ವಂಚಿಸಿದ್ದಾನೆ.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಎಂ.ಮಧು (31) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಕೆಲಸ ಕೊಡಿಸೋದಾಗಿ ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದು, ಈ ಕುರಿತು ವಂಚನೆಗೆ ಒಳಗಾಗಿದ್ದ ಯುವತಿ ಸೆನ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಯುವಕನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಕನ್ನಡ ಮ್ಯಾಟ್ರಿಮೋನಿ ಜಾಲತಾಣದಲ್ಲಿ ನಗರದ ಯುವತಿಯೊಬ್ಬರನ್ನು ಆರೋಪಿ ಪರಿಚಯಿಸಿಕೊಂಡಿದ್ದ. ವಿವಾಹವಾಗುವ ನಂಬಿಕೆ ಗಿಟ್ಟಿಸಿಕೊಂಡು ರೈಲ್ವೆ ಇಲಾಖೆಯ ಮೈಸೂರಿನ ವರ್ಕ್‌ಶಾಪ್‌ನಲ್ಲಿ ಉದ್ಯೋಗ ಕೊಡಿಸುವ ಭರವಸೆ ಮೂಡಿಸಿದ್ದ. ನಯವಾದ ಮಾತುಗಳಿಗೆ ಮಾರುಹೋದ ಯುವತಿ ಹಂತಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ 21 ಲಕ್ಷ ರೂಪಾಯಿ ಹಣ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗೆ ಒಳಗಾದ ಯುವತಿ ಮೇ 4ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯ ವಂಚನೆಯ ಜಾಲ ಬೆಳಕಿಗೆ ಬಂದಿದೆ. ‘ಮ್ಯಾಟ್ರಿಮೋನಿ’ ಜಾಲತಾಣದಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ರಾಜ್ಯದ ಹಲವು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.