ಬೆಂಗಳೂರು: ಸೈಬರ್ ಅಪರಾಧಿಗಳು ದಿನಕ್ಕೊಂದು ಹೊಸ ವೇಷದೊಂದಿಗೆ ಸಾರ್ವಜನಿಕರ ಬೆನ್ನಿಗೆ ಬೀಳುತ್ತಿದ್ದಾರೆ. ಈ ಹಿಂದೆ ಬ್ಯಾಂಕ್ ಕೆವೈಸಿ (KYC), ಲಾಟರಿ, ಡಿಜಿಟಲ್ ಅರೆಸ್ಟ್ ಮೂಲಕ ಸುದ್ದಿಯಾಗುತ್ತಿದ್ದ ಖದೀಮರು, ಈಗ ‘ಮಾನವೀಯತೆ’ ಮತ್ತು ‘ಎಮರ್ಜೆನ್ಸಿ’ ಹೆಸರಿನಲ್ಲಿ ಹೊಸ ಮಾದರಿಯ ವಂಚನೆಗೆ ಇಳಿದಿದ್ದಾರೆ. ಇತ್ತೀಚೆಗೆ ನಡೆದ ಘಟನೆಯೊಂದು ಸಾರ್ವಜನಿಕರು ಎಷ್ಟೊಂದು ಜಾಗರೂಕತೆಯಿಂದ ಇರಬೇಕು ಎಂಬುದಕ್ಕೆ ಕನ್ನಡಿ ಹಿಡಿದಿದೆ.
ವಂಚನೆಯ ರೋಚಕ ಕಾರ್ಯಾಚರಣೆ ಹೀಗಿತ್ತು:
ಘಟನೆಯ ಆರಂಭವು ಒಂದು ಸಾಮಾನ್ಯ ಟೆಕ್ಸ್ಟ್ ಮೆಸೇಜ್‌ನಿಂದ ಆಗುತ್ತದೆ. ವ್ಯಕ್ತಿಯ ಮೊಬೈಲ್‌ಗೆ “Your account is credited Rs. 2000.00” ಎಂಬ ಸಂದೇಶ ಬರುತ್ತದೆ. ಈ ಸಂದೇಶ ನೋಡಿ ಗೊಂದಲಕ್ಕೊಳಗಾಗುವಷ್ಟರಲ್ಲೇ ಅಪರಿಚಿತ ನಂಬರ್‌ನಿಂದ ಕರೆ ಬರುತ್ತದೆ.
ಭಾವನಾತ್ಮಕ ನಾಟಕ: ಕರೆ ಮಾಡಿದ ವ್ಯಕ್ತಿ ಬಹಳ ಕಷ್ಟದಲ್ಲಿದ್ದಂತೆ ನಟಿಸುತ್ತಾ, “ನಾನು ಮೆಡಿಕಲ್ ಶಾಪ್‌ನಲ್ಲಿದ್ದೇನೆ, ಆತುರದಲ್ಲಿ ಹಣ ಕಳುಹಿಸುವಾಗ ಒಂದು ನಂಬರ್ ತಪ್ಪಾಗಿ ನಿಮ್ಮ ಅಕೌಂಟ್ ಗೆ ಬಂದಿದೆ. ಇದು ನನಗೆ ಜೀವನ್ಮರಣದ ಪ್ರಶ್ನೆ, ದಯವಿಟ್ಟು ವಾಪಸ್ ಮಾಡಿ” ಎಂದು ನಂಬರ್ ಸೇರಿದಂತೆ ಸಕಲ ಮಾಹಿತಿಯನ್ನು ನೀಡಿ ನಂಬಿಸಲು ಯತ್ನಿಸುತ್ತಾನೆ.
ಕಣ್ಣಿಗೆ ಮಣ್ಣು ಎರಚುವ ಸಂದೇಶ: ವಂಚಕರು ಕಳುಹಿಸುವ ಎಸ್‌ಎಮ್‌ಎಸ್ (SMS) ಬ್ಯಾಂಕ್‌ನ ಅಧಿಕೃತ ಸಂದೇಶದಂತೆಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅದು ಯಾವುದೇ ಬ್ಯಾಂಕ್‌ನಿಂದ ಬಂದಿದ್ದಲ್ಲ, ಬದಲಿಗೆ ಮೊಬೈಲ್ ನಂಬರ್‌ನಿಂದ ಕಳುಹಿಸಲಾದ ‘ಟೈಪ್ಡ್’ ಮೆಸೇಜ್ ಆಗಿರುತ್ತದೆ. ಇಲ್ಲಿ ವಂಚಕರು ಮಾಡುವ ಅತೀ ದೊಡ್ಡ ತಂತ್ರವೆಂದರೆ, ವ್ಯಕ್ತಿಯ ಮೊಬೈಲ್ ನಂಬರ್ ನ ಕೊನೆಯ ನಾಲ್ಕು ಅಂಕಿಗಳನ್ನೇ ಅಕೌಂಟ್ ನಂಬರ್ ಎಂದು ಬಿಂಬಿಸುವುದು!
ಸೈಬರ್ ಕಿಲಾಡಿಯ ಪ್ಲಾನ್ ಉಲ್ಟಾ ಹೊಡೆದದ್ದು ಎಲ್ಲಿ?
ವ್ಯಕ್ತಿ ಗಡಿಬಿಡಿ ಪಡದೆ ತರ್ಕಬದ್ಧವಾಗಿ ಆಲೋಚಿಸಿದಾಗ ವಂಚನೆ ಬಯಲಾಗಿದೆ:
ಕ್ಯೂಆರ್ ಕೋಡ್ ಪ್ರಶ್ನೆ: ಮೆಡಿಕಲ್ ಶಾಪ್‌ನಲ್ಲಿ ನಂಬರ್ ಮೂಲಕ ಹಣ ಪಾವತಿಸುವ ಬದಲು ಸ್ಕ್ಯಾನರ್ ಬಳಸಬಹುದಿತ್ತಲ್ಲ ಎಂಬ ಪ್ರಶ್ನೆಗೆ ವಂಚಕ ತಡಬಡಾಯಿಸಿದ್ದಾನೆ.
ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ: ಅಧಿಕೃತ ಬ್ಯಾಂಕಿಂಗ್ ಆಪ್ ಮೂಲಕ ಚೆಕ್ ಮಾಡಿದಾಗ ಯಾವುದೇ ಹಣ ಬಂದಿರಲಿಲ್ಲ.
ಟ್ರೂ ಕಾಲರ್ ಎಚ್ಚರಿಕೆ: ವಂಚಕ ಬಳಸಿದ ನಂಬರ್ ಟ್ರೂ ಕಾಲರ್‌ನಲ್ಲಿ ‘Potential Fraud’ ಎಂದು ಕಂಡುಬಂದಿದೆ.
ಹಣ ವಾಪಸ್ ಮಾಡಿದ್ದರೆ ಏನಾಗುತ್ತಿತ್ತು?
ಒಂದು ವೇಳೆ ನೀವು ಮಾನವೀಯತೆ ತೋರಿಸಿ ಆತ ಕಳುಹಿಸುವ ಸ್ಕ್ಯಾನರ್ (Scanner) ಸ್ಕ್ಯಾನ್ ಮಾಡಿ ಹಣ ಕಳುಹಿಸಲು ಮುಂದಾದರೆ, ನಿಮ್ಮ ಯುಪಿಐ (UPI) ಪಿನ್ ನಮೂದಿಸಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಲೂಟಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸ್ಕ್ಯಾನರ್‌ಗಳು ‘ಹಣ ಸ್ವೀಕರಿಸಲು’ ಅಲ್ಲ, ಬದಲಿಗೆ ನಿಮ್ಮ ಖಾತೆಯಿಂದ ‘ಹಣ ಕಳುಹಿಸಲು’ ಸಿದ್ಧಪಡಿಸಲಾದ ಕೊಂಡಿಗಳಾಗಿರುತ್ತವೆ.
ಸಾರ್ವಜನಿಕರಿಗೆ ಕಿವಿಮಾತು:
ಯಾರಾದರೂ ಹಣ ತಪ್ಪಾಗಿ ಬಂದಿದೆ ಎಂದು ಕರೆ ಮಾಡಿದರೆ, ಮೊದಲು ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿ.
ಅಪರಿಚಿತರು ಕಳುಹಿಸುವ ಯಾವುದೇ ಕ್ಯೂಆರ್ ಕೋಡ್ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಬ್ಯಾಂಕ್ ಸಂದೇಶಗಳು ಯಾವಾಗಲೂ ಅಧಿಕೃತ ಐಡಿಗಳಿಂದ (ಉದಾ: AD-HDFCBK) ಬರುತ್ತವೆ, ಸಾಮಾನ್ಯ ಮೊಬೈಲ್ ನಂಬರ್‌ನಿಂದಲ್ಲ ಎಂಬುದನ್ನು ನೆನಪಿಡಿ.
ಒಂದು ವೇಳೆ ವಂಚನೆಗೆ ಒಳಗಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
ಸೈಬರ್ ಖದೀಮರ ಜಾಲಕ್ಕೆ ಬೀಳದಿರಿ, ನಿಮ್ಮ ಜಾಗರೂಕತೆಯೇ ನಿಮ್ಮ ಹಣಕ್ಕೆ ರಕ್ಷಣೆ.








