ಬಾಗಲಕೋಟೆ : ಮೊದಲೇ ಈಗಿನ ಕಾಲದಲ್ಲಿ ಮದುವೆಯಾಗಲು ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಅಂತದ್ರಲ್ಲಿ ಬ್ರೋಕರ್ ಒಬ್ಬನನ್ನು ನಂಬಿದ ವ್ಯಕ್ತಿ ಆತನಿಗೆ 4 ಲಕ್ಷ ರೂಪಾಯಿ ನೀಡಿ ಈಗಾಗಲೇ ಎರಡು ಮದುವೆಯಾಗಿದ್ದ ಮಹಿಳೆಯನ್ನು ಮದುವೆ ಮಾಡಿಸಿದ್ದಾನೆ. ಆದರೆ ಕೆಲವೇ ತಿಂಗಳಲ್ಲಿ ಆಕೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದು, ಇತ್ತ 4 ಲಕ್ಷ ಪಡೆದು ಬ್ರೋಕರ್ ಕೂಡ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.
ಹೌದು ಕಳೆದ 2023ರಲ್ಲಿ ಕುನಾಳ ಗ್ರಾಮದ ಮ್ಯಾರೇಜ್ ಬ್ರೋಕರ್ ಸತ್ಯಪ್ಪ ಎಂಬಾತ ಮುಧೋಳ ನಗರದ ಸೋಮಶೇಖರ ಎಂಬಾತನಿಗೆ ಮದುವೆ ಮಾಡಿಸುತ್ತೇನೆ ಎಂದು 4 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಒಪ್ಪಂದದ ಪ್ರಕಾರ ಶಿವಮೊಗ್ಗದ ಮಂಜುಳಾ ಎಂಬ ಯುವತಿ ಜೊತೆ ಸೊಮಶೇಖರನ ಮದುವೆ ಆಗುತ್ತೆ. ಕೊಟ್ಟ ಮಾತಿನಂತೆ ಸೋಮಶೇಖರ್ ಬ್ರೋಕರ್ ಸತ್ಯಪ್ಪನಿಗೆ 4 ಲಕ್ಷ ನೀಡುತ್ತಾನೆ. ಆದರೆ ಒಂದು ತಿಂಗಳೊಳಗೆ ಹೆಂಡತಿ ಮಂಜುಳಾ ಶಿವಮೊಗ್ಗಕ್ಕೆ ವಾಪಾಸ್ ಹೋಗುತ್ತಾಳೆ.
ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ಸೋಮಶೇಖರ್ ಎಂಬಾತನಿಗೆ ಶಿವಮೊಗ್ಗದ ಮಂಜುಳಾ ಎಂಬಾಕೆಯನ್ನ ಮದುವೆ ಮಾಡಲಾಯಿತು. ಮದುವೆ ಮಾಡಿಸಿ 4 ಲಕ್ಷ ಹಣ ಪಡೆದು ಬ್ರೋಕರ್ ತಂಡ ಎಸ್ಕೇಪ್ ಆಗಿತ್ತು.ಮಂಜುಳಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ಆಕೆಯನ್ನು ದುಡ್ಡಿಗಾಗಿ ಸೋಮಶೇಖರ್ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಾಳೆ. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಪತ್ನಿಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ.
ಆಕೆಯನ್ನು ಕರೆಯಲು ಸೋಮಶೇಖರ್ ಶಿವಮೊಗ್ಗಕ್ಕೆ ಹೋದಾಗ ಸತ್ಯ ತಿಳಿದಿದ್ದು. ಆಕೆ ಈಗಾಗಲೇ ಇಬ್ಬರ ಜೊತೆ ಮದುವೆಯಾಗಿ ಅವರಿಂದ ಲಕ್ಷ-ಲಕ್ಷ ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಇದನ್ನು ತಿಳಿಯುತ್ತಿದ್ದಂತೆ ಪತಿ ಸೋಮಶೇಖರ್ ಮುಧೋಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಇನ್ನಿಬ್ಬರು ಯುವಕರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಜನರ ವಿರುದ್ದ ಪ್ರಕರಣ ದಾಖಲಾಗಿದೆ.