ಬೆಂಗಳೂರು : ಇತ್ತೀಚಿಗೆ ಎಲ್ಲರ ಮೊಬೈಲ್ ಗಳಿಗೆ ಅಪರಿಚಿತ ಮೆಸೇಜ್ ಹಾಗೂ ಲಿಂಕ್ ಗಳು, ಅಲ್ಲದೆ ವಿಡಿಯೋ ಕಾಲ್ ಮೂಲಕ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಬಂದಂತಹ ಲಿಂಕ್ ಒಂದನ್ನು ಕ್ಲಿಕ್ ಮಾಡುವುದರ ಮೂಲಕ ಬೆಂಗಳೂರಿನ ವ್ಯಕ್ತಿ ಒಬ್ಬರು ಸುಮಾರು 21 ಲಕ್ಷ ರೂ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಖಾಸಗಿ ಫೈನಾನ್ಸ್ ಗ್ರೂಪ್‌ವೊಂದರ ಜಾಹೀರಾತು ನೋಡಿ ಅಧಿಕ ಲಾಭದ ಆಸೆಯಿಂದ 71.41 ಲಕ್ಷ ರು. ಹೂಡಿಕೆ ಮಾಡಿ ಬಳಿಕ ವಂಚನೆಗೆ ಒಳಗಾಗಿರುವ ಸಂಬಂಧ ಬೆಂಗಳೂರಿನ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ.ನಗರ 1ನೇ ಹಂತದ ಶಾಕಾಂಬರಿ ನಗರದ ನಿವಾಸಿ ಬಿ.ಹರ್ಷ ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ, ಬಿಎನ್‌ಎಸ್ ಕಲಂ 318 (4) ಮತ್ತು ಕಲಂ 319(2)ರ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಷ ನ.12ರಂದು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆ ನೋಡುವಾಗ, ‘ಆರ್ಯ ಫೈನಾನ್ಸ್ ಗ್ರೂಪ್’ ಎಂಬ ಜಾಹೀರಾತು ಗಮನಿಸಿದ್ದಾರೆ. ಆ ಜಾಹೀರಾತಿನಲ್ಲಿ ನೀಡಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ಅಪರಿಚಿತರು ಹರ್ಷ ಅವರನ್ನು ‘ಆರ್ಯ ಪ್ರಾಫಿಟ್ ಪ್ಲಸ್ ಎಕ್ಸ್-ಎ’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ನೀವು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನಲಾಭನೀಡುವುದಾಗಿ ಆಮಿಷವೊಡ್ಡಿದ್ದಾರೆ. ಅಪರಿಚಿತರ ಈ ಮಾತು ನಂಬಿದ ಹರ್ಷ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಹರ್ಷ ಅವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.