ಚಿಕ್ಕಮಗಳೂರು : ಇತ್ತೀಚಿಗೆ ನಮ್ಮ ಮೊಬೈಲ್ ಗಳಿಗೆ ಅಪರಿಚಿತ ಲಿಂಕ್ ಗಳು ಹೆಚ್ಚಾಗಿ ಬರುತ್ತಿದ್ದು ಇದು ಸೈಬರ್ ವಂಚಕರು ನಮ್ಮ ಖಾತೆಯಲ್ಲಿರುವ ದುಡ್ಡು ಹೊಡೆಯುವ ಪ್ಲಾನ್ ಆಗಿದೆ. ಹಾಗಾಗಿ ಅಪರಿಚಿತ ಲಿಂಕ್ ಬಂದ ತಕ್ಷಣ ಆ ಲಿಂಕನ್ನು ಓಪನ್ ಮಾಡದೆ ಡಿಲೀಟ್ ಮಾಡುವುದು ಆದಷ್ಟು ಸೂಕ್ತ
ಇದೀಗ ಚಿಕ್ಕಮಗಳೂರಲ್ಲಿ ಕೂಡ ಇಂತಹದೇ ಘಟನೆ ನಡೆದಿದ್ದು, ಅನುಮಾನಾಸ್ಪದ APK ಫೈಲ್ ಲಿಂಕ್ ಕ್ಲಿಕ್ ಮಾಡಿದ 62 ವರ್ಷದ ಹಿರಿಯ ನಾಗರಿಕರೊಬ್ಬರು, ತಮ್ಮ ಬ್ಯಾಂಕ್ ಖಾತೆಯಿಂದ 3.12 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ವ್ಯಕ್ತಿಯ ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಬಂದಿತ್ತು. ಅದರ ಬಗ್ಗೆ ತಿಳಿಯದೇ ಅವರು ಕ್ಲಿಕ್ ಮಾಡಿದ್ದರು. ಈ ಲಿಂಕ್ APK ಫೈಲ್ ರೂಪದಲ್ಲಿದ್ದು, ಅದನ್ನು ಡೌನ್‌ಲೋಡ್ ಮಾಡಿ ತೆರೆಯುತ್ತಿದ್ದಂತೆ, ಸೈಬರ್ ಕಳ್ಳರು ಅವರ ಮೊಬೈಲ್‌ನಲ್ಲಿದ್ದ ವೈಯಕ್ತಿಕ ಹಾಗೂ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಕಳವು ಮಾಡಿಕೊಂಡಿದ್ದಾರೆ.
ಇದಾದ ಬಳಿಕ, ಅವರ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಿಂದ ಒಟ್ಟು 3 ಲಕ್ಷ 12 ಸಾವಿರ ರೂ. ಹಣವನ್ನು ಹಂತ, ಹಂತವಾಗಿ ಅನಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ. ಮೊಬೈಲ್‌ಗೆ ಬಂದ ಬ್ಯಾಂಕ್ ಸಂದೇಶಗಳ ಮೂಲಕ ಈ ಹಣ ಕಳವಾಗಿರುವುದು ವ್ಯಕ್ತಿಗೆ ಅರಿವಾಗಿದೆ. ಈ ಘಟನೆಯ ಬಗ್ಗೆ ಬ್ಯಾಂಕ್ ಗ್ರಾಹಕರ ಸೇವಾ ನಂಬರ್ ಸಂಪರ್ಕಿಸಿದಾಗ, APK ಫೈಲ್ ಮೂಲಕ ಡೇಟಾ ಕಳವು ಮಾಡಿ ಈ ವಂಚನೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಬಳಿಕ ಹಣ ಕಳೆದುಕೊಂಡವರು ತಕ್ಷಣವೇ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.








