ಗುರುಗ್ರಾಮ್: ನಗರದ ಜೀವನ್ ಆಸ್ಪತ್ರೆಯಲ್ಲಿ ಔಷಧಗಳಿಗೆ ಹಣ ಪಾವತಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ರೋಗಿಗಳ ಪೋಷಕರ ಹಲ್ಲೆಯಿಂದ ಮೂವರು ಪೊಲೀಸರು ಮತ್ತು ಓರ್ವ ಆಸ್ಪತ್ರೆಯ ಸಿಬ್ಬಂದಿಗೆ ಗಾಯಗಳಾಗಿವೆ. ಗುರುಗ್ರಾಮದ ರಿಥೋಜ್ ಹಳ್ಳಿಯ ಬಳಿಯಿರುವ ಜೀವನ್ ಆಸ್ಪತ್ರೆಯಲ್ಲಿ ಔಷಧಗಳಿಗೆ ಹಣ ನೀಡುವ ವಿಚಾರದಲ್ಲಿ ಗಲಾಟೆಯಾಗುತ್ತಿದೆ ಎಂದು ಭೋಂಡ್ಸಿ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಆಸ್ಪತ್ರೆಯ ನೌಕರನ ಕೈ ಮುರಿದು, ಸಿಬ್ಬಂದಿ ನಿಂದಿಸಿದ್ದಾರೆ. ಜೀವನ್ ಆಸ್ಪತ್ರೆಗೆ ಆಗಮಿಸಿದ ಪೊಲೀಸ್ ತಂಡ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಆದರೆ, ಇಬ್ಬರು ಆರೋಪಿಗಳು ತಮ್ಮ ಕಾರಿನಿಂದ ದೊಣ್ಣೆ, ರಾಡ್ ಮತ್ತು ಇಟ್ಟಿಗೆಗಳನ್ನು ತಂದು ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಹೆಡ್ ಕಾನ್ಸ್ಟೆಬಲ್ ಅನಿಲ್ ಕುಮಾರ್ ಮತ್ತು ಪೊಲೀಸ್ ಪೇದೆಗಳಾದ ಮೋಹಿತ್, ದೀಪಕ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಡ್ ಕಾನ್ಸ್ಟೆಬಲ್ ಅನಿಲ್ ಕುಮಾರ್ ಸ್ಥಿತಿ ಗಂಭೀರವಾಗಿದೆ. ಘಟನೆಯ ಕುರಿತು ಪೊಲೀಸರು ಭೋಂಡ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.