ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ (ಇರಾನ್-ಅಮೆರಿಕ) ನಡೆಯುತ್ತಿರುವ ಯುದ್ಧದ ಕಾರ್ಮೋಡಗಳು ಮತ್ತು ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಮಟ್ಟದ ರಿಲೀಫ್ ನೀಡಿದೆ. ವಿಮಾನ ನಿಲ್ದಾಣಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕವನ್ನು ಶೇ. 25 ರಷ್ಟು ಕಡಿತಗೊಳಿಸಲು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಆದೇಶಿಸಿದೆ.
ಈ ಹೊಸ ದರ ಕಡಿತವು ಏಪ್ರಿಲ್ 8, 2026 ರಿಂದಲೇ ಜಾರಿಗೆ ಬಂದಿದ್ದು, ಮುಂದಿನ ಮೂರು ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ.
ಕೇವಲ ದೇಶೀಯ ವಿಮಾನಗಳಿಗೆ: ಈ ರಿಯಾಯಿತಿಯು ಸದ್ಯಕ್ಕೆ ಕೇವಲ ದೇಶೀಯ ವಿಮಾನಯಾನಕ್ಕೆ (Domestic Flights) ಮಾತ್ರ ಅನ್ವಯಿಸಲಿದೆ. ಅಂತರಾಷ್ಟ್ರೀಯ ವಿಮಾನಗಳಿಗೆ ಹಳೆಯ ದರಗಳೇ ಮುಂದುವರಿಯಲಿವೆ.
ಈ ನಿರ್ಧಾರದಿಂದಾಗಿ ಏರ್ ಇಂಡಿಯಾ, ಇಂಡಿಗೋ ಮತ್ತು ಆಕಾಶ ಏರ್ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ವಿಮಾನಗಳು ಹಾದಿ ಬದಲಿಸಿ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚಾಗಿದ್ದ ಆರ್ಥಿಕ ಹೊರೆಯನ್ನು ಇದು ತಗ್ಗಿಸಲಿದೆ.
ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಸರ್ಕಾರದ ಮುಂದೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು, ಈ ತುರ್ತು ಕ್ರಮ ಕೈಗೊಳ್ಳುವಂತೆ AERA ಗೆ ಸೂಚಿಸಿತ್ತು.







