ನವದೆಹಲಿ: ಬುಧವಾರ ಬೆಳಿಗ್ಗೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು, ಹಾರಾಟದ ಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ದೆಹಲಿಗೆ ವಾಪಸಾಗಿದೆ. ಈ ಘಟನೆಯಿಂದಾಗಿ ವಿಮಾನದಲ್ಲಿದ್ದ ಸುಮಾರು 230 ಪ್ರಯಾಣಿಕರ ಪ್ರಯಾಣಕ್ಕೆ ಅಡ್ಡಿಯಾಗಿದೆ.
“ಮೇ 27 ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಫ್ಲೈಟ್ AI173, ನಿಗದಿತ ಸುರಕ್ಷತಾ ಕಾರ್ಯವಿಧಾನಗಳ ಅನ್ವಯ ತಾಂತ್ರಿಕ ದೋಷದ ಕಾರಣದಿಂದಾಗಿ ವಾಪಸ್ ದೆಹಲಿಗೆ ಬಂದಿದೆ” ಎಂದು ಏರ್ ಇಂಡಿಯಾ ಅಧಿಕೃತವಾಗಿ ತಿಳಿಸಿದೆ.
ಮೂಲಗಳ ಪ್ರಕಾರ, ಬೋಯಿಂಗ್ 777-300 ER ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗುವ ಮುನ್ನ ಸುಮಾರು ಎಂಟು ಗಂಟೆಗಳ ಕಾಲ ಆಕಾಶದಲ್ಲಿತ್ತು. ‘ಫ್ಲೈಟ್ ರಾಡಾರ್ 24’ (Flightradar24) ಡೇಟಾದ ಪ್ರಕಾರ, ವಿಮಾನವು ಚೀನಾದ ವಾಯುಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ವಾಪಸ್ ತಿರುಗಿದೆ.
ವಿಮಾನವು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಏರ್ ಇಂಡಿಯಾದ ಸುರಕ್ಷತಾ ಮಾನದಂಡಗಳ ಪ್ರಕಾರ ತಾಂತ್ರಿಕ ತಪಾಸಣೆಗೆ ಒಳಪಡಲಿದೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.








