ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಸಂಸ್ಥೆಯು ತನ್ನ ಕ್ಯಾಬಿನ್ ಕ್ರೂ (ವಿಮಾನ ಸಿಬ್ಬಂದಿ) ಸದಸ್ಯರಿಗಾಗಿ ಹೊಸ ‘ಆರೋಗ್ಯ ಮತ್ತು ಫಿಟ್ನೆಸ್ ಅನುಸರಣೆ ನೀತಿ’ಯನ್ನು ಪ್ರಕಟಿಸಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿಪಡಿಸಿದ ಬಾಡಿ ಮಾಸ್ ಇಂಡೆಕ್ಸ್ (BMI) ಮಿತಿಗಿಂತ ಹೆಚ್ಚು ತೂಕ ಹೊಂದಿರುವ ಸಿಬ್ಬಂದಿಯನ್ನು ವಿಮಾನ ಹಾರಾಟದ ಕರ್ತವ್ಯದಿಂದ (Roster) ಕೈಬಿಡಲಾಗುವುದು ಮಾತ್ರವಲ್ಲದೆ, ಅವರ ಸಂಬಳವನ್ನೂ ಕಡಿತಗೊಳಿಸಲಾಗುವುದು.
ಏರ್ ಇಂಡಿಯಾ 18 ರಿಂದ 24.9 ರವರೆಗಿನ BMI ಅನ್ನು ‘ಸಾಮಾನ್ಯ’ ಎಂದು ಪರಿಗಣಿಸಿದೆ.
Overweight (25-29.9): ಇವರನ್ನು ವಿಮಾನ ಹಾರಾಟದಿಂದ ತಡೆಹಿಡಿಯಲಾಗುವುದು (Derostered). ಇವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಕೆಲಸಕ್ಕೆ ಮರಳಬಹುದು.
Obese (30 ಕ್ಕಿಂತ ಹೆಚ್ಚು): ಇವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ, ಸಂಬಳ ತಡೆಹಿಡಿಯಲಾಗುವುದು (Loss of Pay).
ಈ ಹೊಸ ನಿಯಮವು ಮೇ 1, 2026 ರಿಂದ ಜಾರಿಗೆ ಬರಲಿದೆ. ಇದು ಪ್ರಸ್ತುತ ಇರುವ ಸಿಬ್ಬಂದಿ ಹಾಗೂ ತರಬೇತಿ ಪಡೆಯುತ್ತಿರುವವರಿಗೂ ಅನ್ವಯಿಸುತ್ತದೆ.ವಿಮಾನ ಹಾರಾಟದ ಮೊದಲು ಅಥವಾ ನಂತರ ಸಿಬ್ಬಂದಿಗಳ ತೂಕವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಪಾಸಣೆ ಮಾಡುವ ಅಧಿಕಾರವನ್ನು ಕಂಪನಿ ಹೊಂದಿದೆ.
ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಗಳು ದೈಹಿಕವಾಗಿ ಸದೃಢರಾಗಿರಬೇಕು ಎಂಬುದು ಏರ್ ಇಂಡಿಯಾದ ವಾದವಾಗಿದೆ.
ಒಂದು ವೇಳೆ ಸಿಬ್ಬಂದಿಗಳು ನಿಗದಿತ ಅವಧಿಯೊಳಗೆ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳದಿದ್ದರೆ, ಅವರಿಗೆ ಎಚ್ಚರಿಕೆ ಪತ್ರ ನೀಡಲಾಗುವುದು ಮತ್ತು ಇದು ಉದ್ಯೋಗದಿಂದ ವಜಾ ಮಾಡುವ ಹಂತಕ್ಕೂ ತಲುಪಬಹುದು ಎಂದು ಸೂಚಿಸಲಾಗಿದೆ.








