ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದಾದ್ಯಂತ ವಾಯುಪ್ರದೇಶ (Airspace) ಮುಚ್ಚಿರುವುದು ಮತ್ತು ಭದ್ರತಾ ಆತಂಕಗಳಿಂದಾಗಿ ಏರ್ ಇಂಡಿಯಾ ಸಂಸ್ಥೆಯು ಕಳೆದ ಮೂರು ವಾರಗಳಲ್ಲಿ ಸುಮಾರು 2,500 ವಿಮಾನಗಳನ್ನು ರದ್ದುಗೊಳಿಸಿದೆ.
ಏರ್ ಇಂಡಿಯಾ ಪ್ರಸ್ತುತ ಪಶ್ಚಿಮ ಏಷ್ಯಾದ ತನ್ನ ಸಾಮಾನ್ಯ ವೇಳಾಪಟ್ಟಿಯ ಕೇವಲ ಶೇ. 30ರಷ್ಟು ವಿಮಾನಗಳನ್ನು ಮಾತ್ರ ಕಾರ್ಯಾಚರಣೆ ಮಾಡುತ್ತಿದೆ. ಹಲವು ವಿಮಾನ ನಿಲ್ದಾಣಗಳು ಮತ್ತು ವಾಯುಮಾರ್ಗಗಳು ಅಸುರಕ್ಷಿತವಾಗಿರುವುದರಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
“ಪಶ್ಚಿಮ ಏಷ್ಯಾದ ಯುದ್ಧವು ಏರ್ ಇಂಡಿಯಾ ಸಮೂಹದ ಮೇಲೆ ದೊಡ್ಡ ಮಟ್ಟದ ಆರ್ಥಿಕ ಪರಿಣಾಮ ಬೀರಿದೆ,” ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ತಮ್ಮ ಸಿಬ್ಬಂದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಯುರೋಪ್ ಮತ್ತು ಅಮೆರಿಕಕ್ಕೆ ಹೋಗುವ ವಿಮಾನಗಳು ಸಂಘರ್ಷದ ಪ್ರದೇಶಗಳನ್ನು ತಪ್ಪಿಸಲು ದೀರ್ಘವಾದ ಪರ್ಯಾಯ ಮಾರ್ಗಗಳನ್ನು ಬಳಸುತ್ತಿವೆ. ಇದರಿಂದ ಪ್ರಯಾಣದ ಸಮಯ ಹೆಚ್ಚಾಗುವುದಲ್ಲದೆ, ಇಂಧನ ಬಳಕೆಯೂ ಅಧಿಕವಾಗುತ್ತಿದೆ.
ವಿಮಾನ ಇಂಧನ ಬೆಲೆಗಳು ದುಪ್ಪಟ್ಟಾಗಿರುವುದರಿಂದ, ಸಂಸ್ಥೆಯು ಈಗಾಗಲೇ ಹೊಸ ಟಿಕೆಟ್ಗಳ ಮೇಲೆ ‘ಫ್ಯುಯೆಲ್ ಸರ್ಚಾರ್ಜ್’ (Fuel Surcharge) ವಿಧಿಸಿದೆ. ಇದರಿಂದ ವಿಮಾನ ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.








